ದುಬೈ: ಪರಿಸರವಾದಿಗಳಿಗೆ ದೀರ್ಘಾವಧಿ ವಾಸ್ತವ್ಯಕ್ಕೆ ಅವಕಾಶ ನೀಡುವ ವೀಸಾ ವ್ಯವಸ್ಥೆಯನ್ನು ಯುಎಇ ಗುರುವಾರ ಘೋಷಿಸಿದೆ. 'ಬ್ಲೂ ರೆಸಿಡೆನ್ಸಿ' ಎಂದು ಕರೆಯಲಾಗುವ ಈ ವೀಸಾ 10 ವರ್ಷಗಳ ಅವಧಿಯನ್ನು ಹೊಂದಿದೆ. ಪರಿಸರ ರಕ್ಷಣೆಗೆ ಅಸಾಧಾರಣ ಕೊಡುಗೆ ನೀಡಿದವರಿಗೆ ಹಾಗೂ ಶ್ರಮಿಸಿದ ವ್ಯಕ್ತಿಗಳಿಗೆ ಈ ವೀಸಾ ಲಭ್ಯವಾಗಲಿದೆ.
ಯುಎಇನ ಒಳಗೆ ಅಥವಾ ಹೊರಗೆ ಸುಸ್ಥಿರವಾದ ಪರಿಸರ ಉಪಕ್ರಮಗಳನ್ನು ಕೈಗೊಂಡವರು ಬ್ಲೂ ರೆಸಿಡೆನ್ಸಿ ವೀಸಾ ಪಡೆಯಲು ಅರ್ಹರಾಗುತ್ತಾರೆ ಎಂದು ಯುಎಇನ ಹೇಳಿಕೆ ತಿಳಿಸಿದೆ.
ಅಂತರರಾಷ್ಟ್ರೀಯ ಸಂಸ್ಥೆಗಳು, ಸಂಘ, ಸಂಸ್ಥೆಗಳು, ಎನ್‌ಜಿಓಗಳು,ಜಾಗತಿಕ ಪ್ರಶಸ್ತಿ ಪುರಸ್ಕೃತರು ಹಾಗೂ ಪರಿಸರ ಸಂರಕ್ಷಣೆಗಾಗಿ ಶ್ರಮಿಸಿದ ಪ್ರಮುಖ ಕಾರ್ಯಕರ್ತರು ಹಾಗೂ ಸಂಶೋಧಕರು ಈ ವೀಸಾಕ್ಕೆ ಅರ್ಹರಾಗುತ್ತಾರೆ.
ಅರ್ಹ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು ಗುರುತು, ಪೌರತ್ವ, ಕಸ್ಟಮ್ಸ್ ಹಾಗೂ ಬಂದರು ಸುರಕ್ಷತೆಗಾಗಿನ ಫೆಡರಲ್ ಪ್ರಾಧಿಕಾರದ ಮೂಲಕ ಸಲ್ಲಿಸಬಹುದಾಗಿದೆ. ಯುಎಇನಲ್ಲಿ ದೀರ್ಘಾವಧಿಯ ವಾಸ್ತವ್ಯಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ವ್ಯಕ್ತಿಗಳನ್ನು ನಾಮಕರಣಗೊಳಿಸಬಹುದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.