: ಮಲಯಾಳಂ ಚಲನಚಿತ್ರದಿಂದ ಸ್ಫೂರ್ತಿ ಪಡೆದು ಅಪಾಯಕಾರಿ ಸಾಹಸ ಮಾಡಲು ಮುಂದಾಗಿದ್ದ ಕೇರಳ ಯೂಟ್ಯೂಬರ್ ಅನ್ನು ಬಂಧಿಸಲಾಗಿದೆ. ಸಂಜು ಟೆಕ್ಕಿ ಬಂಧಿತ ಯೂಟ್ಯೂಬರ್ ಎನ್ನಲಾಗಿದೆ.
ಈ ಯುವಕ ಚಲಿಸುತ್ತಿದ್ದ ಕಾರಿನಲ್ಲಿ ಟಾರ್ಪಾಲಿನ್ ಶೀಟ್ ಹಾಕಿ ಅದರಲ್ಲಿ ನೀರನ್ನು ತುಂಬಿಸಿ ತಾತ್ಕಾಲಿಕ ಈಜುಕೊಳವನ್ನು ಸ್ಥಾಪಿಸಿದ್ದರು ಎಂದು ಆರೋಪಿಸಲಾಗಿದೆ.
ಯೂಟ್ಯೂಬರ್ ಸಂಜು ಟೆಕ್ಕಿ ಈ ದುಸ್ಸಾಹಕ್ಕೆ ಕೈ ಹಾಕಿದ್ದು ಯೂಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀವ್ಸ್ ಪಡೆದಿದೆ. ವಿಡಿಯೋದಲ್ಲಿ ಸಂಜು ಮತ್ತು ಅವನ ಸ್ನೇಹಿತರು ರಸ್ತೆಯಲ್ಲಿ ಚಲಿಸುತ್ತಿರುವ ಕಾರಿನಲ್ಲಿ ತುಂಬಿದ ನೀರನ್ನು ಈಜುತ್ತಾ ಎಳನೀರು ಹೀರುತ್ತಾ, ಮುಳುಗುತ್ತಾ, ಏಳುತ್ತಾ ಸಂತೋಷಪಡುತ್ತಿರುವುದು ಕಂಡು ಬಂದಿದೆ.
ನೀರು ಚೆಲ್ಲಿ ಡ್ರೈವರ್ ಸೀಟ್ ಮತ್ತು ಎಂಜಿನ್‌ಗೂ ತಲುಪಿದೆ. ಸಂಜು ಮತ್ತು ಅವನ ಸ್ನೇಹಿತರು ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಅದನ್ನು ಒಣಗಿಸುವ ಯತ್ನ ನಡೆಸಿದ್ದಾರೆ. ಇದರಿಂದ ತೀವ್ರ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ನೀರನ್ನು ರಸ್ತೆಗೆ ಸುರಿದಿದ್ದು ಬೇರೆ ವಾಹನ ಸುರಕ್ಷತೆಗೆ ಧಕ್ಕೆ ತಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಗಮನಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು ಸಂಚಾರ ನಿಯಮ ಉಲ್ಲಂಘಿಸಿ ಹಿನ್ನೆಲೆಯಲ್ಲಿ ಯೂಟ್ಯೂಬರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಕಾರಿನ ನೋಂದಣಿ ಪ್ರಮಾಣ ಪತ್ರವನ್ನು ಅಮಾನತು ಮಾಡಲಾಗಿದೆ.
ಈ ರೀತಿ ದುಸ್ಸಾಹಸ ಮೆರೆದ ಸಂಜು ಮತ್ತು ಆತನ ಸ್ನೇಹಿತರಿಗೆ ಶಿಕ್ಷೆಯಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಒಂದು ವಾರ ಸಮಾಜಿಕ ಸೇವೆ ಮಾಡುವಂತೆ ಹಾಗೂ ಇಲಾಖೆಯ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ವಾಹನ ಚಾಲನೆ ಮಾಡಿದವನ ಪರವಾನಗಿಯನ್ನು ಒಂದು ವರ್ಷದವರೆಗೆ ಅಮಾನತುಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.