ಬದಿಯಡ್ಕ: ಅಗತ್ಯಕ್ಕೆ ಥೆರಪಿಸ್ಟ್‍ಗಳಿಲ್ಲದ ಕಾರಣ ಎಂಡೋಸಲ್ಫಾನ್ ಸಂತ್ರಸ್ತರು ಹೆಚ್ಚಿರುವ ಜಿಲ್ಲೆಯ ಮಾದರಿ ಪುನರ್ವಸತಿ ಕೇಂದ್ರಗಳು(ಎಂ.ಸಿ.ಆರ್.ಸಿ) ಸವಾಲು ಎದುರಿಸುತ್ತಿವೆ.
ಕಳೆದ ಮಾರ್ಚ್‍ನಲ್ಲಿ ಹೊಸದಾಗಿ ನೇಮಕಗೊಳಿಸಿದ ಥೆರಪಿಸ್ಟ್‍ಗಳು ಕೆಲಸಕ್ಕೆ ಹಾಜರಾಗಿಲ್ಲ. ಜಿಲ್ಲೆಯ ಕೇಂದ್ರಗಳಲ್ಲಿ ಒಕ್ಯುಪೇಶನಲ್ ಥೆರಪಿಸ್ಟ್‍ಗಳಿಲ್ಲ. ಮಾರ್ಚ್‍ನಲ್ಲಿ ನಡೆದ ಸಂದರ್ಶದಲ್ಲಿ ಆಯ್ದ ಸ್ಟಿಚ್ ಥೆರಪಿಸ್ಟ್‍ಗಳಲ್ಲಿ ಇಬ್ಬರು ಮಾತ್ರವೇ ಕರ್ತವ್ಯಕ್ಕೆ ಹಾಜರಾಗಿರುವುದು. ಪ್ರಸ್ತುತ ಫಿಸಿಯೋ ಥೆರಪಿಸ್ಟ್‍ಗಳು ಎಲ್ಲಾ ಕಡೆಗಳಲ್ಲೂ ಇದ್ದು, ಆದರೆ ಕಾರಡ್ಕ, ಬೋವಿಕ್ಕಾನ, ಕುಂಬ್ಡಾಜೆ, ಎಣ್ಮಕಜೆ ಮೊದಲಾದೆಡೆಗಳ ಕೇಂದ್ರಗಳಲ್ಲಿ ಸ್ಟಿಟ್ ಥೆರಪಿಸ್ಟ್‍ಗಳು ಕರ್ತವ್ಯಕ್ಕೆ ಹಾಜರಾಗಿಲ್ಲ. ಕುಂಬ್ಡಾಜೆ ಪಂಚಾಯತಿ ಸ್ಟಿಚ್ ಥೆರಪಿಸ್ಟ್‍ನ್ನು ಕಳ್ಳಾರ್‍ನ ಕೇಂದ್ರಕ್ಕೆ ಕಳೆದ ತಿಂಗಳು ವರ್ಗಾಯಿಸಲಾಗಿತ್ತು. ಆದರೆ ಅದಕ್ಕೆ ಬದಲಾಗಿ ಯಾರೂ ತಲುಪಿಲ್ಲ. ಒಕ್ಯುಪೇಶನಲ್ ಥೆರಪಿಸ್ಟ್ ಹುದ್ದೆಗೆ ಸಂದರ್ಶನಕ್ಕೆ ಭಾಗವಹಿಸಲು ಕೂಡಾ ಉದ್ಯೋಗಾರ್ಥಿಗಳು ತಲುಪಿಲ್ಲ. ವೇತನ ಸ್ಕೇಲ್‍ನ ಲೋಪವೇ ಉದ್ಯೋಗಾರ್ಥಿಗಳು ತಲುಪದಿರಲು ಕಾರಣವೆಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಹೊಸ ಹೆಚ್ಚಿಸಿದ ವೇತನ ಸ್ಕೇಲ್‍ಗಾಗಿ ಮನವಿ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾರಡ್ಕದ ಮಾದರಿ ಶಿಶು ಪುನರ್ವಸತಿ ಕೇಂದ್ರದ ಸ್ಪೆಷಲ್ ಎಜ್ಯುಕೇಟರ್ ಹುದ್ದೆಯಲ್ಲಿ ಅಧ್ಯಾಪಕರಿಲ್ಲದೆ ತೊಂದರೆಯಾಗಿದೆ. ನಾಲ್ಕು ಖಾಲಿ ಹುದ್ದೆ ಇದೆ. ಒಂದು ವರ್ಷದ ಹಿಂದೆ ಬೆಳ್ಳೂರಿನ ಕೇಂದ್ರಕ್ಕೆ ಓರ್ವೆ ಅಧ್ಯಾಪಿಕೆ ವರ್ಗಾವಣೆಗೊಂಡರು. ಇದೂ ಸೇರಿ ಮೂರು ಅಧ್ಯಾಪಿಕೆಯರ ಕೊರತೆ ಇಲ್ಲಿದೆ. 36 ಮಕ್ಕಳು ಇಲ್ಲಿದ್ದಾರೆ. ಮಕ್ಕಳು ಕಡಿಮೆ ಇರುವ ಕೇಂದ್ರಗಳಿಂದ ಇಲ್ಲಿಗೆ ಅಧ್ಯಾಪಕಿಯರನ್ನು ನೇಮಕ ಮಾಡಬೇಕೆಂಬ ಬೇಡಿಕೆಯೂ ಪರಿಗಣಿಸಲ್ಪಟ್ಟಿಲ್ಲ. ಎಣ್ಮಕಜೆಯಲ್ಲಿ ನಾಲ್ಕು ಅಧ್ಯಾಪಕರು ಬೇಕಾಗಿದ್ದು, ಇಲ್ಲಿ ಇಬ್ಬರು ಮಾತ್ರ ಇದ್ದಾರೆ. ಬದಿಯಡ್ಕದಲ್ಲಿ ಓರ್ವೆ ಸ್ಪೆಷಲ್ ಎಜ್ಯುಕೇಟರ್ ಮಾತ್ರವೇ ಈಗ ಇದ್ದಾರೆ.