ಕಾಸರಗೋಡು: ಜಿಲ್ಲೆಯ ಪ್ರಮುಖ ದಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ತೆರಳುವ ಹಾದಿಯೊಂದು ಬೋವಿಕ್ಕಾಣ ಸನಿಹದ ಮಲ್ಲದಲ್ಲಿ ಕುಸಿತದ ಭೀತಿಯಲ್ಲಿದೆ.
ಬೋವಿಕ್ಕಾನದಿಂದ ಮಲ್ಲ ದೇವಸ್ಥಾನಕ್ಕೆ ಸಂಚರಿಸುವ ರಸ್ತೆ ಮಧ್ಯೆ ಅಪಾಯ ಕೈಬೀಸಿ ಕರೆಯುತ್ತಿದೆ. ರಸ್ತೆ ಅಭಿವೃದ್ಧಿಕಾರ್ಯ ನಡೆಸುವ ಸಂದರ್ಭ ಒಂದು ಪಾಶ್ರ್ವ ಕುಸಿಯುತ್ತಿದ್ದರೂ, ಇದನ್ನು ಪರಿಗಣಿಸದೆ ರಸ್ತೆ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಇದರಿಂದ ರಸ್ತೆ ಭಾರೀ ಅಪಾಯದಂಚಿಗೆ ಸಾಗಿದೆ. ಬೋವಿಕ್ಕಾನ ಎಂಟನೇ ಮೈಲಿಗಲ್ಲಿನಿಂದ ಮಲ್ಲ ಬೀಟಿಯಡ್ಕ ರಸ್ತೆಯನ್ನು ಜಿ.ಪಂ ಹಾಗೂ ಕೇಂದ್ರ ಮೊತ್ತ ಬಳಸಿ ಸುಮಾರು 5.25ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗಿದ್ದರೂ, ಕುಸಿದ ಪ್ರದೇಶವನ್ನು ದುರಸ್ತಿನಡೆಸದೆ ಹಾಗೇ ಬಿಡಲಾಗಿದೆ. ಕುಸಿತಕ್ಕೀಡಾಗಿರುವ ರಸ್ತೆ ಅಂಚಿಗೆ ಸೂಕ್ತ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯರು ಮಾಡಿಕೊಂಡ ಮನವಿಗೂ ಯಾವುದೇ ಬೆಲೆಯಿಲ್ಲದಾಗಿದೆ.
ಬಿಜೆಪಿ ಪ್ರತಿಭಟನೆ:
ಭಾರೀ ಮೊತ್ತ ವ್ಯಯಿಸಿ ರಸ್ತೆ ಅಭಿವೃದ್ಧಿ ನಡೆಸಿದರೂ, ಕುಸಿಯುತ್ತಿರುವ ರಸ್ತೆ ಅಂಚಿಗೆ ಸೂಕ್ತ ತಡೆಗೋಡೆ ನಿರ್ಮಿಸದಿರುವುದನ್ನು ಪ್ರತಿಭಟಿಸಿ ಬಿಜೆಪಿ ಮುಳಿಯಾರು ಪಂಚಾಯಿತಿಯ 46ನೇ ಬೂತ್ ಸಮಿತಿ ವತಿಯಿಂದ ಮಾನವ ತಡೆಗೋಡೆ ನಿರ್ಮಿಸಿ ಪ್ರತಿಭಟನೆ ಹಮ್ಮಿಕೊಮಡಿತು. ಬಿಜೆಪಿ ಮಂಡಲ ಸಮಿತಿ ಉಪಾಧ್ಯಕ್ಷ ಪಿ. ಜಯಕೃಷ್ಣನ್ ಉದ್ಘಾಟಿಸಿದು. ಮನೋಜ್ ಕುಮಾರ್ ಕೊಡವಂಜಿ ಅಧ್ಯಕ್ಷತೆ ವಹಿಸಿದ್ದರು.ಮಂಡಲ, ಪಂಚಾಯಿತಿ ಸಮಿತಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಮಡಿದ್ದರು.