ನವದೆಹಲಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಿಗದಿಯಾಗಿದ್ದ ಲೆಕ್ಕ ಪರಿಶೋಧಕ (ಸಿಎ) ಕೆಲವು ವಿಷಯಗಳ ಪರೀಕ್ಷೆಗಳನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ) ಪರೀಕ್ಷೆಗಳನ್ನು ಮತದಾನ ನಡೆಯುವ ದಿನಗಳಂದು ಪರೀಕ್ಷೆಯನ್ನು ನಿಗದಿಪಡಿಸಿಲ್ಲ ಎಂದು ಹೇಳಿದೆ.
ಲೋಕಸಭೆಗ ಸಾರ್ವತ್ರಿಕ ಚುನಾವಣೆ ಮೇ 7, 13 ರಂದು ಮತದಾನ ನಡೆಯಲಿದ್ದು 6 ಮತ್ತು 7 ರಂದು ಯಾವುದೇ ಪರೀಕ್ಷೆ ನಿಗದಿ ಆಗಿಲ್ಲ. ಇದೀಗ ಪರೀಕ್ಷೆಯ ದಿನಾಂಕವನ್ನು ಬದಲಾಯಿಸುವುದರಿಂದ ಪರೀಕ್ಷೆ ನಿರ್ವಹಣೆಗೆ ನಡೆಸಿರುವ ಸಿದ್ಧತೆಗಳಿಗೆ ಅಡ್ಡಿಪಡಿಸಿದಂತಾಗುತ್ತದೆ. ಪರೀಕ್ಷೆ ಸಿದ್ಧತೆ ನಡೆಸಿರುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಹುದು ಎಂದು ಕೋರ್ಟ್ ಹೇಳಿದೆ.
ಸಿಎ ಪರೀಕ್ಷೆಗಳು ಮೇ 2ರಿಂದ 17ರವರೆಗೆ ನಡೆಯಲಿದೆ. ಮೇ 7 ಮತ್ತು 13 ರಂದು ಮತದಾನ ನಡೆಯಲಿರುವುದರಿಂದ 8 ಮತ್ತು 14 ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಇತರ ದಿನಾಂಕಗಳಿಗೆ ಮುಂದೂಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ದೆಹಲಿ ಹೈ ಕೋರ್ಟ್ ಸಹ ಮೇ 8ರಂದು ನಡೆಯಲಿರುವ ಸಿಎ ಪರೀಕ್ಷೆಗಳನ್ನು ಮುಂದೂಡಲು ನಿರಾಕರಿಸಿದೆ.