ಕಾನ್: ಹಿಂದಿ ಸಿನಿಮಾ 'ದಿ ಶೇಮ್‌ಲೆಸ್'ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದ ಅನಸೂಯಾ ಸೆನ್‌ಗುಪ್ತ ಅವರು 2024ನೇ ಸಾಲಿನ ಕಾನ್ ಚಲನಚಿತ್ರೋತ್ಸವದ 'ಅನ್ ಸರ್ಟೇನ್ ರಿಗಾರ್ಡ್' ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಅನಸೂಯಾ ಅವರು ಕೋಲ್ಕತ್ತ ಮೂಲದವರು. ಈ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದ ಮೊದಲ ಭಾರತೀಯ ಕಲಾವಿದೆ ಇವರು. ಅವರು ಈ ಪ್ರತಿಷ್ಠಿತ ಸಿನಿಮೋತ್ಸವದಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವುದು ಭಾರತದ ಪಾಲಿಗೆ ಒಂದು ಮೈಲಿಗಲ್ಲು ಎಂದು ಸಿನಿಮಾ ಕ್ಷೇತ್ರದ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ರಾತ್ರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅನಸೂಯಾ ಅವರು, ಪ್ರಶಸ್ತಿಯನ್ನು ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಹಾಗೂ ಸಮಾಜದ ಅಂಚಿಗೆ ಸರಿಸಲಾಗಿರುವ ಸಮುದಾಯಗಳಿಗೆ ಅರ್ಪಿಸುತ್ತಿರುವುದಾಗಿ ಹೇಳಿದರು.
'ಸಮಾನತೆಗಾಗಿ ಹೋರಾಡಬೇಕು ಎಂದಾದರೆ ನೀವು ಲೈಂಗಿಕ ಅಲ್ಪಸಂಖ್ಯಾತರೇ ಆಗಿರಬೇಕಿಲ್ಲ. ವಸಾಹತೀಕರಣವು ಎಷ್ಟು ಕೆಟ್ಟದ್ದು ಎಂಬುದನ್ನು ಹೇಳಲು ನೀವು ವಸಾಹತಿನಲ್ಲಿಯೇ ಇದ್ದಿರಬೇಕು ಎಂದೇನೂ ಇಲ್ಲ. ನಾವು ಬಹಳ ಒಳ್ಳೆಯ ಮನುಷ್ಯರಾಗಿದ್ದರೆ ಸಾಕು' ಎಂದು ಅವರು ಹೇಳಿದರು.
ಅನಸೂಯಾ ಅವರು 2009ರಲ್ಲಿ ಬಿಡುಗಡೆ ಆದ 'ಮ್ಯಾಡ್ಲಿ ಬಂಗಾಲಿ' ಚಿತ್ರದಲ್ಲಿ ಪೋಷಕ ಪಾತ್ರವೊಂದನ್ನು ನಿರ್ವಹಿಸಿದ್ದರು. 'ಅನ್ ಸರ್ಟೇನ್ ರಿಗಾರ್ಡ್' ವಿಭಾಗವು ಸಿನಿಮಾ ಲೋಕದ ಹೊಸ ಅಲೆಗಳನ್ನು, ಹೊಸ ಪಥಗಳನ್ನು ಹಾಗೂ ಹೊಸ ದೇಶಗಳಲ್ಲಿನ ಸಿನಿಮಾಗಳನ್ನು ಗುರುತಿಸುವ ಉದ್ದೇಶ ಹೊಂದಿದೆ.