ಪತ್ತನಂತಿಟ್ಟ: ಶಬರಿಮಲೆ ಶ್ರೀಧರ್ಮಶಾಸ್ತ ದೇವಸ್ಥಾನದಲ್ಲಿ ವೃಷಭಮಾಸ ಪೂಜೆಗಾಗಿ ನಿನ್ನೆ ಸಂಜೆ ಬಾಗಿಲು ತೆರೆಯಲಾಯಿತು. ನಿನ್ನೆ ಸಂಜೆ 5 ಗಂಟೆಗೆ ತಂತ್ರಿ ಕಂಠಾರರ್ ಮಹೇಶ್ ಮೋಹನ್ ಅವರ ಉಪಸ್ಥಿತಿಯಲ್ಲಿ ಮೇಲ್ಶಾಂತಿ ಪಿ.ಎನ್. ಮಹೇಶ ನಂಬೂದಿರಿ ದೇವಸ್ಥಾನದ ಬಾಗಿಲು ತೆರೆದು ದೀಪ ಬೆಳಗಿಸಿದರು.
ನಂತರ ಉಪದೇವತೆಗಳಾದ ಗಣಪತಿ ಮತ್ತು ನಾಗರ ಮಂಟಪದಲ್ಲೂ ದೀಪ ಬೆಳಗಿಸಲಾಯಿತು. ಹದಿನೆಂಟನೇ ಮೆಟ್ಟಿಲಿನ ಮುಂಭಾಗದ ಅಗ್ನಿಕುಂಡದಲ್ಲಿ ಅಗ್ನಿಪ್ರಜ್ವಲನೆಗೈದ ಬಳಿಕ ಅಯ್ಯಪ್ಪನ ಭಕ್ತರು ಹದಿನೆಂಟನೇ ಮೆಟ್ಟಿಲು ಹತ್ತಿ ಅಯ್ಯಪ್ಪನ ದರ್ಶನ ಪಡೆದರು. ಭಕ್ತರಿಗೆ ತಂತ್ರಿ ಹಾಗೂ ಮೇಲ್ಶಾಂತಿ ವಿಭೂತಿ ಪ್ರಸಾದ ವಿತರಿಸಿದರು. ಮಾಳಿಗಪ್ಪುರಂ ಮೇಲ್ಶಾಂತಿ ಮುರಳಿ ನಂಬೂದಿರಿ ಮಾಳಿಗಪ್ಪುರಂನಲ್ಲಿ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ಮಂಗಲ ಪ್ರಸಾದ ನೀಡಿದರು.