ಕಾಸರಗೋಡು: ಬ್ರಾಹ್ಮಣ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾ ಮಟ್ಟದ ಬ್ರಾಹ್ಮಣ ಸಮಾವೇಶ ಮಾ 5ರಂದು ಎಡನೀರು ಮಠದ ಸಭಾಂಗಣದಲ್ಲಿ ಜರುಗಲಿರುವುದಾಗಿ ಸಂಘಟಕ ಸಮಿತಿ ಅಧ್ಯಕ್ಷ ಹಿರಿಯ ವಕೀಲ ಐ.ವಿ ಭಟ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹವ್ಯಕ, ಕರಾಡ, ಶಿವಳ್ಳಿ, ಯೋಗಕ್ಷೇಮಸಭಾ, ಕೋಟ, ಶಿವ(ಸ್ಥಾನಿಕ), ಕೇರಳ ಬ್ರಾಹ್ಮಣ(ಅಯ್ಯರ್)ಪಂಗಡವನ್ನೊಳಗೊಂಡ ಬ್ರಾಹ್ಮಣ ಪರಿಷತ್ 2001ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ನಿರಂತರ ಚಟುವಟಿಕೆಯಲ್ಲಿ ನಿರತವಾಗಿದೆ. 5ರಂದು ಬೆಳಗ್ಗೆ 7ಕ್ಕೆ ಗಣಪತಿ ಹವನ, ಭಜನೆ, ನೋಂದಾವಣೆ, 10ಕ್ಕೆ ಉದ್ಘಾಟನಾ ಸಮಾರಂಭ ನಡೆಯುವುದು. ಪರಿಷತ್ ರಕ್ಷಾಧಿಕಾರಿ, ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ಪರಿಷತ್ ಅಧ್ಯಕ್ಷ ಎಚ್ ವಿಠಲ ಭಟ್ ಅಧ್ಯಕ್ಷತೆ ವಹಿಸುವರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಮಂಗಳೂರು ಕೋಟೆಕಾರಿನಲ್ಲಿ ಕಯಾಚರಿಸುತ್ತಿರುವ ಶೃಂಗೇರಿ ಶಾಖಾ ಮಠದ ಆಡಳಿತಾಧಿಕಾರಿ ಸತ್ಯಶಂಕರ ಬೊಳ್ಳಾವ ಹಾಗೂ ಕೇರಳ ಸರ್ಕಾರದ ನಿವೃತ್ತ ಕಾರ್ಯದರ್ಶಿ ಗೋಪಾಲಕ್ರಷ್ಣ ಭಟ್ ಐಎಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಈ ಸಂದಬ್ ವಿವಿಧ ವಲಯಗಳಲ್ಲಿ ಸಾಧನೆ ನಡೆಸಿದ ಮಹನೀಯರನ್ನು ಸನ್ಮಾನಿಸಲಾಗುವುದು. 11.30ಕ್ಕೆ ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ, 3.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಪಂಜ ಉದ್ಘಾಟಿಸುವರು. ಸಂಘಟಕ ಸಮಿತಿ ಅಧ್ಯಕ್ಷ ಐ,ವಿ ಭಟ್ ಅಧ್ಯಕ್ಷತೆ ವಹಿಸುವರು. ತಂತ್ರ ವಿದ್ಯಾಪೀಠ ಕಾರ್ಯಾಧ್ಯಕ್ಷ ಮುಲ್ಲಪಳ್ಳಿ ಕೃಷ್ಣ ನಂಬೂದಿರಿ, ನಿಟ್ಟೆ ವಿಶ್ವ ವಿದ್ಯಾಲಯ ಉಪ ಕುಲಪತಿ ಡಾ. ಎಂ.ವಿ ಮೂಡಿತ್ತಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಧಕರಿಗೆ ಸನ್ಮಾನ ನಡೆಯುವುದು. ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಅವರಿಂದ ಆಶೀರ್ವಚನ ಮಂತ್ರಾಕ್ಷತೆ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಚ್ ವಿಠಲ ಭಟ್, ಆರ್. ಸೂರ್ಯನಾರಾಯಣ ಭಟ್ ಪಾಣತ್ತೂರ್, ಎಚ್.ಎಸ್. ಭಟ್, ಜಯನಾರಾಯಣ ತಾಯನ್ನೂರ್, ಪ್ರೊ. ಎ.ಶ್ರೀನಾಥ್ ಉಪಾಧ್ಯಾಯ, ವಿಷ್ಣುಮೋಹನ ಐಲಕುಂಜೆ, ಮುರಳೀಧರ ಪೆರಿಗಮನ ಉಪಸ್ಥಿತರಿದ್ದರು.