ಕಾಸರಗೋಡು: ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆ ಕೇಂದ್ರೀಕರಿಸಿ ವ್ಯಾಪಕ ಖೋಟಾ ನೋಟು ಚಲಾವಣೆ ನಡೆಸುತ್ತಿರುವುದರ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಖೋಟಾ ನೋಟು ವಿತರಣೆಗೆ ಸಂಬಂಧಿಸಿ ಪೊಲೀಸರು ಕಾಸರಗೋಡು ಚೀಮೇನಿಯ ಡ್ರೈವಿಂಗ್ ಸ್ಕೂಲ್ ಒಂದರ ಮಹಿಳಾ ಸಿಬ್ಬಂದಿ ಶೋಭಾ, ನೀಲೇಶ್ವರ ನಿವಾಸಿ ಮುನೀರ್ ಹಾಗೂ ಪಯ್ಯನ್ನೂರು ಕೋಡೋತ್ ನಿವಾಸಿ ಮೆಕ್ಯಾನಿಕ್ ಶಿಬು ಎಂಬವರನ್ನು ಬಂಧಿಸಿದ್ದಾರೆ.
ಆರೋಪಿಗಳು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಯ ವಿವಿಧೆಡೆ ಖೋಟಾ ನೋಟು ಚಲಾವಣೆ ನಡೆಸುವ ಪ್ರಮುಖ ಸೂತ್ರಧಾರರೆಂದು ಸಂಶಯಿಸಲಾಗಿದೆ. ಬಂಧಿತರ ಪೈಕಿ ಶಿಜು ಪಯ್ಯನ್ನೂರಿನ ಬಾರ್ ಒಂದಕ್ಕೆ ಪಾವತಿಸಿರುವ 2600ರೂ. ಬಿಲ್‍ನಲ್ಲಿ 500ರೂ .ಮುಖ ಬೆಲೆಯ ಐದು ಖೋಟ ನೋಟು ಪತ್ತೆಯಾಗಿದ್ದು, ಈ ಬಗ್ಗೆ ಪಯ್ಯನ್ನೂರು ಠಾಣೆ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಡ್ರೈವಿಂಗ್ ಸ್ಕೂಲ್ ಸಿಬ್ಬಂದಿ ಶೋಭಾ ಬಗ್ಗೆ ಮಾಹಿತಿ ನೀಡಿದ್ದನು. ಶೋಭಾ ಮನೆಗೆ ದಾಳಿ ನಡೆಸಿದ ಪೊಲೀಸರು, ಈಕೆಯ ಮನೆಯಿಂದ ಖೋಟಾ ನೋಟು ಮುದ್ರಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ. ಶೋಭಾ ನೀಡಿದ ಮಾಹಿತಿಯನ್ವಯ ನೀಲೇಶ್ವರ ನಿವಾಸಿ ಮುನೀರ್‍ನನ್ನು ಬಂಧಿಸಲಾಗಿತ್ತು. ಖೋಟಾ ನೋಟು ಪ್ರಕರಣದ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.