ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯನ್ವಯ ಮರೆಯಲ್ಲಿ ಚೆರ್ಕಳ ಪೇಟೆಯಲ್ಲಿ ಬೃಹತ್ ಗಾತ್ರದ ಮರವನ್ನು ಕಡಿದುರುಳಿಸಲಾಗಿದೆ. ಚೆರ್ಕಳ ಪೇಟೆಯ ಒಂದು ಅಂಚಿಗಿರುವ ಈ ಬೃಹತ್ ದೇವದಾರು ಮರವನ್ನು ಕಾಮಗಾರಿಗೆ ತೊಡಕುಂಟಾಗುತ್ತಿರುವ ನೆಪದಲ್ಲಿ ಕಡಿದುರುಳಿಸಲಾಗಿದೆ.
ಚೆರ್ಕಳದಿಂದ ಕಾಞಂಗಾಡು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ, ಹತ್ತು ಹಲವು ವಾಹನಗಳಿಗೆ ನೆರಳು ನೀಡುತ್ತಿದ್ದ ಮರ ಇನ್ನು ನೆನಪು ಮಾತ್ರ ಆಗಿ ಉಳಿಯಲಿದೆ. ಚೆರ್ಕಳ ಪೇಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಓವರ್‍ನಿಂದ ಚೆರ್ಕಳ ಹೊಸ ಬಸ್ ನಿಲ್ದಾಣ, ಚೆರ್ಕಳ-ಜಾಲ್ಸೂರ್, ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಗೆ ಸಮಪರ್ಕ ಕಲ್ಪಿಸುವ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸುವ ಯೋಜನೆಯನ್ವಯ ಬೃಹತ್ ಮರಕ್ಕೆ ಕೊಡಲಿಯೇಟು ನೀಡಲಾಗಿದೆ. ಈಗಾಗಲೇ ತಲಪ್ಪಡಿಯಿಂದ ಚೆರ್ಕಳ ವರೆಗಿನ ಮೊದಲ ರೀಚ್ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ಭಾರಿ ಪ್ರಮಾಣದ ಮರಗಳು ಧರಾಶಾಯಿಯಾಗಿದೆ.
ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ನೂರಾರು ಮರಗಳನ್ನು ಕಡಿದುರುಳಿಸಬೇಕಾಗಿ ಬಂದಿದ್ದು, ಇದಕ್ಕೆ ಬದಲಿಯಾಗಿ ರಸ್ತೆ ನಿರ್ಮಾಣ ಕಂಪೆನಿ ಊರಾಲುಂಗಾಲ್ ಸೊಸೈಟಿ ವಿವಿಧ ಪ್ರದೇಶಗಳಲ್ಲಿ ಸಸಿ ನೆಡುವ ಕಾರ್ಯವನ್ನೂ ಹಮ್ಮಿಕೊಂಡಿದೆ. ಆದರೆ, ಕೆಲವು ಪ್ರದೇಶದಲ್ಲಿ ಯೋಜನೆಗೆ ಅಡಚಣೆಯಾಗದಿದ್ದರೂ, ಮರಗಳನ್ನು ಕಡಿದುರುಳಿಸುತ್ತಿರುವುದಕ್ಕೆ ಪರಿಸರ ಪ್ರೇಮಿಗಳ ವಿರೋಧವನ್ನೂ ಎದುರಿಸಬೇಕಾಗಿತ್ತು.
ಚೆರ್ಕಳ ಪೇಟೆಯಲ್ಲಿ ನೆರಳು ನಿಡುವ ಮರವನ್ನು ಉಳಿಸಿಕೊಂಡು ಕಾಮಗಾರಿ ನಡೆಸಬಹುದಾಗಿದ್ದರೂ, ಕೆಲವು ಕಟ್ಟಡ ಮಾಲಿಕರು, ವ್ಯಾಪಾರಿಗಳ ಒತ್ತಡಕ್ಕೆ ಮಣಿದು ಮರ ಉರುಳಿಸಿರುವುದಾಗಿ ಆರೋಪ ಕೇಳಿ ಬರುತ್ತಿದೆ.