ಮ್ಯಾಡ್ರಿಡ್: ಚೆನ್ನೈನಿಂದ ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್‌ಗೆ ಸಾಗುತ್ತಿರುವ ಹಡಗಿಗೆ ಸ್ಪೇನ್ ದೇಶ ತನ್ನ ಕಾರ್ಟಗೆನರ ಬಂದರಿನಲ್ಲಿ ನಿಲುಗಡೆಗೆ ಅವಕಾಶ ನಿರಾಕರಿಸಿದೆ ಎಂದು ಸ್ಪೇನ್‌ನ ವಿದೇಶ ಸಚಿವ ಜೋಸ್ ಮ್ಯಾನುವೆಲ್ ಅಲ್ಬಾರೆಸ್ ಹೇಳಿದ್ದಾರೆ.
ʼಮರಿಯನ್ನೆ ಡೇನಿಕಾʼ ಹೆಸರಿನ ಹಡಗು ಸ್ಪೇನ್ ಬಂದರಿನಲ್ಲಿ ಮೇ 21ರಂದು ನಿಲುಗಡೆಗೆ ಅವಕಾಶ ಕೋರಿತ್ತು. ಗಾಝಾ ಯುದ್ಧ ಆರಂಭಗೊಂಡಂದಿನಿಂದ ಇಸ್ರೇಲ್‌ಗೆ ಎಲ್ಲಾ ಶಸ್ತ್ರಾಸ್ತ್ರ ರಫ್ತು ನಿಷೇಧಿಸುವ ಸ್ಪೇನ್ ನೀತಿಯ ಅನುಸಾರ ಅನುಮತಿ ನಿರಾಕರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ಡೆನ್ಮಾರ್ಕ್ ಧ್ವಜವಿರುವ ಹಡಗಿನಲ್ಲಿ 27 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್‌ನ ಹೈಫಾ ಬಂದರಿಗೆ ಸಾಗಿಸಲಾಗುತ್ತಿತ್ತು.
ಈ ರೀತಿ ಸ್ಪೇನ್ ಬಂದರಿಗೆ ಇಸ್ರೇಲ್‌ಗೆ ಹೊರಟಿರುವ ಶಸ್ತ್ರಾಸ್ತ್ರ ಹೊತ್ತ ಹಡಗು ಆಗಮಿಸಿರುವುದು ಮೊದಲನೇ ಬಾರಿ ಇದಾಗಿದ್ದು ಅನುಮತಿ ನಿರಾಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಅದೇ ಬಂದರಿನಲ್ಲಿ ಮಿಲಿಟರಿ ಉಪಕರಣಗಳನ್ನು ಹೊತ್ತ ಇನ್ನೊಂದು ಹಡಗಿಗೆ ಅನುಮತಿ ನಿರಾಕರಿಸಬೇಕೆಂದು ಸ್ಪೇನ್‌ನ ಎಡ ಪಂಥೀಯ ಮೈತ್ರಿ ಆಗ್ರಹಿಸಿತ್ತು. ಆದರೆ ಈ ಹಡಗು ಝೆಕ್ ಗಣರಾಜ್ಯಕ್ಕೆ ಹೋಗುವ ಹಡಗಾಗಿರುವುದರಿಂದ ಅದಕ್ಕೆ ಅನುಮತಿಯನ್ನು ನಿರಾಕರಿಸಲಾಗಿಲ್ಲ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಹೇಳಿದ್ದಾರೆ.