ನವದೆಹಲಿ: ನರ್ಮದಾ ಬಚಾವೋ ಆಂದೋಲನದ ನಾಯಕಿ, ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ದೆಹಲಿಯ ನ್ಯಾಯಾಲಯವೊಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಅಪರಾಧಿ ಎಂದು ಘೋಷಿಸಿದೆ. ದೂರು ದಾಖಲಾಗಿ 23 ವರ್ಷಗಳಿಗೂ ಹೆಚ್ಚಿನ ಅವಧಿಯ ನಂತರ ಈ ಆದೇಶ ಬಂದಿದೆ.

ಈಗ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿರುವ ವಿ.ಕೆ. ಸಕ್ಸೇನಾ ಅವರು ಈ ದೂರು ದಾಖಲಿಸಿದ್ದರು. ಪಾಟ್ಕರ್ ಅವರ ಮಾತುಗಳು ಮಾನಹಾನಿಕರವಾಗಿದ್ದವು ಎಂದು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ರಾಘವ್ ಶರ್ಮ ಅವರು ಹೇಳಿದ್ದಾರೆ. ಈ ಅಪರಾಧಕ್ಕೆ ಗರಿಷ್ಠ ಎರಡು ವರ್ಷಗಳ ಸಾದಾ ಜೈಲು ಶಿಕ್ಷೆ ಅಥವಾ ದಂಡ ಅಥವಾ ಅವೆರಡನ್ನೂ ವಿಧಿಸಲು ಅವಕಾಶ ಇದೆ.
ಪಾಟ್ಕರ್ ಅವರು ತಮ್ಮ ವಿರುದ್ಧ ಹೊರಡಿಸಿದ ಪತ್ರಿಕಾ ಹೇಳಿಕೆಯೊಂದು ಮಾನಹಾನಿಕರವಾಗಿದೆ ಎಂದು ದೂರಿ ಸಕ್ಸೇನಾ ಅವರು 2000ನೆಯ ಇಸವಿಯಲ್ಲಿ ದೂರು ದಾಖಲಿಸಿದ್ದರು. ಆಗ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದರು.
ಸಕ್ಸೇನಾ ಅವರನ್ನು ಮೇಧಾ ಅವರು 'ಹೇಡಿ, ದೇಶಭಕ್ತ ಅಲ್ಲ' ಎಂದು ಕರೆದಿದ್ದು ಹಾಗೂ ಅವರು ಹವಾಲಾ ವಹಿವಾಟಿನಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದು ಮಾನಹಾನಿಕರವಾಗಿದ್ದವು. ಅವು ಸಕ್ಸೇನಾ ಕುರಿತು ನಕಾರಾತ್ಮಕ ಚಿತ್ರಣ ಮೂಡಿಸುವಂತೆಯೂ ಇದ್ದವು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಶಿಕ್ಷೆಯ ಪ್ರಮಾಣ ಕುರಿತು ವಾದ-ಪ್ರತಿವಾದ ಮೇ 30ಕ್ಕೆ ನಿಗದಿಯಾಗಿದೆ.