ಕಾಸರಗೋಡು: ಸಹಕಾರಿ ಸಂಸ್ಥೆಗಳನ್ನು ಸಿಪಿಎಂ, ಭ್ರಷ್ಟಾಚಾರ ಮತ್ತು ಬೃಹತ್ ವಂಚನಾ ಕೇಂದ್ರಗಳನ್ನಾಗಿ ಮಾಡುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂಬುದಾಗಿ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ವಕೀಲ ಕೆ. ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಪಿಎಂ ಅಧೀನದಲ್ಲಿರುವ ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ವಂಚನೆ ಆಡಳಿತ ಸಮಿತಿ ಅರಿವಿಗೆ ಬಾರದೆ ಕಾರ್ಯದರ್ಶಿಯೊಬ್ಬರಿಂದ ನಡೆಸಲು ಸಾಧ್ಯವಿಲ್ಲ. 5 ಕೋಟಿಗೂ ಹೆಚ್ಚು ಮೊತ್ತದ ಭಾರಿ ವಂಚನೆ ನಡೆಸಿ, ಆಡಳಿತ ಮಂಡಳಿ ಮತ್ತು ಸಿಪಿಎಂ ನಾಯಕತ್ವ ಕಾರ್ಯದರ್ಶಿಯನ್ನು ಮಾತ್ರ ಹೊಣೆಗಾರರನ್ನಾಗಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದರು. ಸಿಪಿಎಂ ನಿಯಂತ್ರಣದಲ್ಲಿದೆ ಸಣ್ಣ ಸಹಕಾರಿ ಸಂಘಗಳಲ್ಲೂ ಕೋಟ್ಯಂತರ ರೂ. ವಂಚನೆ ನಡೆಯುತ್ತಿದೆ. ಸಹಕಾರಿ ಸಂಘಗಳನ್ನು ಸಿಪಿಎಂ ಭ್ರಷ್ಟಾಚಾರ ಮತ್ತು ವಂಚನಾ ಕೇಂದ್ರಗಳನ್ನಾಗಿ ಮಾರ್ಪಡಿಸಿದೆ. ಹಗರಣ ಬೆಳಕಿಗೆ ಬರುತ್ತಿದ್ದಂತೆ ಸಿಪಿಎಂ ಈ ಹಣ ವಾಪಸ್ ನೀಡಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ. ಕಾರಡ್ಕ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋಓಪರೇಟಿವ್ ಸೊಸೈಟಿಯಲ್ಲಿ ನಡೆದಿರುವ ವಂಚನೆ ಬಗ್ಗೆ ಸಮಗ್ರ ತನಿಖೆಯಾಗಬೇಕು ಹಾಗೂ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೆ. ಶ್ರೀಕಾಂತ್ ಆಗ್ರಹಿಸಿದ್ದಾರೆ.