ನ್ಯೂಯಾರ್ಕ್ (AP): ಗಾಜಾದಲ್ಲಿನ ಯುದ್ಧ, ಹಿಂಸಾಚಾರ ಸೇರಿದಂತೆ ಕಳೆದ ವರ್ಷ ಸಂಭವಿಸಿದ ವಿವಿಧ ವಿದ್ಯಮಾನಗಳ ಕುರಿತು 2023ರಲ್ಲಿ ಉತ್ತಮ ಸುದ್ದಿ ಪ್ರಕಟಿಸಿದ್ದಕ್ಕಾಗಿ 'ನ್ಯೂಯಾರ್ಕ್ ಟೈಮ್ಸ್' ಮತ್ತು 'ವಾಷಿಂಗ್ಟನ್ ಪೋಸ್ಟ್' ಪತ್ರಿಕಾ ಸಂಸ್ಥೆಗಳಿಗೆ ಸೋಮವಾರ ತಲಾ ಮೂರು ಪುಲಿಟ್ಜರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿವಿಧ ದೇಶಗಳಿಂದ ಜನರು ಅಮೆರಿಕಕ್ಕೆ ವಲಸೆ ಹೋಗಿರುವುದಕ್ಕೆ ಸಂಬಂಧಿಸಿ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಅಸೋಸಿಯೇಟೆಡ್ ಪ್ರೆಸ್‌ಗೆ (ಎಪಿ) 'ನುಡಿಚಿತ್ರ ಛಾಯಾಚಿತ್ರಗ್ರಹಣ' ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
2023ರ ಸಾಲಿನ 15 ವಿಭಾಗಗಳಲ್ಲಿ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ಜೊತೆಗೆ ಪುಸ್ತಕ, ಸಂಗೀತ ಮತ್ತು ರಂಗಭೂಮಿಗೆ ಸಂಬಂಧಿಸಿದ ಎಂಟು ಕಲಾ ವಿಭಾಗಳಲ್ಲಿನ ಸಾಧನೆಗೂ ಪ್ರಶಸ್ತಿ ನೀಡಲಾಯಿತು. ಸಾರ್ವಜನಿಕ ಸೇವೆ ವಿಭಾಗದಲ್ಲಿ ವಿಜೇತರಾದವರಿಗೆ ಚಿನ್ನದ ಪದಕ ನೀಡಲಾಯಿತು. ಇತರರಿಗೆ ಪ್ರದಾನ ಮಾಡಲಾದ ಪ್ರಶಸ್ತಿಗಳು ₹12 ಲಕ್ಷಕ್ಕೂ ಹೆಚ್ಚು ನಗದನ್ನು ಒಳಗೊಂಡಿವೆ.