ನವದೆಹಲಿ: ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಳ್ಳಲು ಬಳಸಲಾಗುವ ಪೂರಕ ಪ್ರೊಟೀನ್ ಪದಾರ್ಥಗಳನ್ನು ದೀರ್ಘಕಾಲದವರೆಗೆ ಸೇವಿಸುವುದರಿಂದ ಮೂಳೆಗಳಲ್ಲಿ ಖನಿಜಾಂಶಗಳ ಇಳಿಕೆ, ಕಿಡ್ನಿ ಸಮಸ್ಯೆಯಂತಹ ಅಡ್ಡ ಪರಿಣಾಮ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ, ಪೂರಕ ಪ್ರೊಟೀನ್ ಪದಾರ್ಥಗಳ ಸೇವನೆಯನ್ನು ಸಾಧ್ಯವಾದಷ್ಟು ನಿಯಂತ್ರಿಸುವಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಎಚ್ಚರಿಸಿದೆ.
ಅಲ್ಲದೆ, ಅತಿ ಸಂಸ್ಕರಿತ ಹಾಗೂ ಸಕ್ಕರೆ ಅಂಶವುಳ್ಳ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವಂತೆ ಸೂಚಿಸಿದೆ.
ಹೈದರಾಬಾದ್ ಮೂಲದ ರಾಷ್ಟ್ರೀಯ ಪೌಷ್ಠಿಕಾಂಶ ಸಂಸ್ಥೆ ಹಾಗೂ ಐಸಿಎಂಆರ್ ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿರುವ ಪರಿಷ್ಕೃತ 'ಭಾರತೀಯರ ಆಹಾರಕ್ರಮ ಮಾರ್ಗಸೂಚಿ' ವರದಿಯಲ್ಲಿ ಭಾರತೀಯರಿಗೆ 17 ಮುಖ್ಯ ಮಾರ್ಗಸೂಚಿಗಳನ್ನು ನೀಡಲಾಗಿದ್ದು, ಸಮತೋಲಿತ ಆಹಾರ ಸೇವನೆ ಹಾಗೂ ಸೂಕ್ತ ಆಹಾರ ಕ್ರಮ ಪಾಲಿಸುವ ಮೂಲಕ ಜನರು ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ.
ಅಲ್ಲದೆ, ಬಳಕೆಗೂ ಮುನ್ನ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲಿರುವ ಸೂಚನಾ ಫಲಕವನ್ನು ಓದುವ ಮೂಲಕ ಜನರು ವಿವೇಚನಾಯುಕ್ತರಾಗಿ ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಬಹುದು ಎಂದು ಸಲಹೆ ನೀಡಿದೆ. ಭಾರತದಲ್ಲಿ ರೋಗಗಳಿಗೆ ತುತ್ತಾದ ಜನರ ಪೈಕಿ, ಅಂದಾಜು ಶೇ.56.4 ಮಂದಿ ಸರಿಯಾದ ಆಹಾರ ಕ್ರಮ ಪಾಲಿಸದ ಕಾರಣದಿಂದಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದಿದೆ.