ತಿರುವನಂತಪುರಂ: ಮುಂಬರುವ ಮಂಡಲ-ಮಕರ ಬೆಳಕು ಉತ್ಸವದ ಋತುವಿನಲ್ಲಿ ಯಾವುದೇ ಸ್ಪಾಟ್ ಬುಕ್ಕಿಂಗ್ ಇರುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ತಿಳಿಸಿದೆ.
ಆನ್‍ಲೈನ್ ಬುಕಿಂಗ್‍ಗೆ ಮಾತ್ರ ಅವಕಾಶ ನೀಡುವುದು ಸದ್ಯದ ನಿರ್ಧಾರವಾಗಿದೆ. ದೈನಂದಿನ ಬುಕಿಂಗ್ ಅನ್ನು 80,000 ಕ್ಕೆ ನಿಗದಿಪಡಿಸಲಾಗಿದೆ. ಜನದಟ್ಟಣೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಲಾಗಿದೆ.
ಕಳೆದ ಬಾರಿ ಶಬರಿಮಲೆಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದ ಸರ್ಕಾರಿ ವ್ಯವಸ್ಥೆಗಳು ತೀರ್ವ ವಿಮರ್ಶೆಗೊಳಗಾದ ಪರಿಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಿನ್ನೆ ನಡೆದ ದೇವಸ್ವಂ ಮಂಡಳಿ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಪಾಟ್ ಬುಕ್ಕಿಂಗ್ ಮೂಲಕ ಬರುವ ಭಕ್ತರ ಸಂಖ್ಯೆಯನ್ನು ನಿಖರವಾಗಿ ಲೆಕ್ಕ ಹಾಕಲು ಸಾಧ್ಯವಾಗದೇ ಇರುವುದರಿಂದ ಜನದಟ್ಟಣೆ ಹೆಚ್ಚಾಗಿ ದರ್ಶನದ ಸಮಯವನ್ನು ವಿಸ್ತರಿಸುವ ಅನಿವಾರ್ಯತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಈಗಿನ ನಿರ್ಧಾರಕ್ಕೆ ಬರಲಾಗಿದೆ. ಏತನ್ಮಧ್ಯೆ, ತಿರುವಾಭರಣ ಮೆರವಣಿಗೆ ಮತ್ತು ಮಕರ ಬೆಳಕು ಉತ್ಸವದ ವೇಳೆ ಆನ್‍ಲೈನ್ ಬುಕ್ಕಿಂಗ್ ಅನ್ನು ಸಡಿಲಿಸಬೇಕೇ ಎಂಬುದರ ಕುರಿತು ನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.