ಮುಳ್ಳೇರಿಯ: ಬೆಳ್ಳೂರು ಗ್ರಾಮ ಪಂಚಾಯಿತಿಯ ಆದೂರು ಗ್ರಾಮದ ಮಿಂಚಿಪದವಿನಲ್ಲಿ ಕಂದಾಯಾಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತವಾಗಿ ಕೆಂಪುಕಲ್ಲು ಸಾಗಿಸುತ್ತಿದ್ದ ಲಾರಿ ಹಾಗೂ ಕ್ವಾರೆ ಹದಗೊಳಿಸಲು ಬಳಸುತ್ತಿದ್ದ ಜೆಸಿಬಿಯನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶನದನ್ವಯ ಕಾರ್ಯಾಚರಣೆ ನಡೆಸಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳನ್ನು ನೆಟ್ಟಣಿಗೆ ಗ್ರೂಪ್ ಗ್ರಾಮಾಧಿಕಾರಿ ಕಚೇರಿ ವಠಾರದಲ್ಲಿರಿಸಲಾಗಿದೆ.
ಕಾಸರಗೋಡು ಭೂಮಾಪನ ತಹಸೀಲ್ದಾರ್ ಮುರಳಿ ಪಿ.ವಿ., ಅಡೂರು ಗ್ರಾಮಾಧಿಕಾರಿ ಸತ್ಯನಾರಾಯಣ ಎ ಮತ್ತು ಕ್ಲರ್ಕ್ ಅಭಿಷೇಕ್ ಬಿ ಕಾರ್ಯಾಚರಣೆಯಲ್ಲಿ ಪಲ್ಗೊಂಡಿದ್ದರು. ಜಿಲ್ಲಾಧಿಕಾರಿ ನಿರ್ದೇಶ ಪ್ರಕಾರ ಮಂಜೇಶ್ವರಂ ತಾಲೂಕಿನ ವಿವಿಧ ಕೇಂದ್ರಗಳಲ್ಲಿ ಭೂಮಾಪನ ತಹಸೀಲ್ದಾರ್ ನೇತೃತ್ವದಲ್ಲಿ ಶನಿವಾರ ನಡೆಸಲಾದ ಕಾರ್ಯಾಚರಣೆಯಲ್ಲಿ ಆರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.