ಕಾಸರಗೋಡು: ಪತಿ, ಮಕ್ಕಳನ್ನು ತೊರೆದು, ಬೇರೊಬ್ಬ ಯುವಕನೊಂದಿಗೆ ವಾಸಿಸುತ್ತಿದ್ದ ಮಹಿಳೆ, ಕೊನೆಗೆ ಆತನ ಮನೆಗೇ ಬೆಂಕಿ ಹಚ್ಚಿ ಜೈಲುಪಾಲಾಗಿದ್ದಾಳೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಡಾಲುಮೇರ್ಕಳ ಕಯ್ಯಾರು ಮಾಣಿಯತ್ತಡ್ಕ ನಿವಾಸಿ ನಯನ್‍ಕುಮಾರ್ ಎಂಬವರೊಂದಿಗೆ ವಾಸಿಸುತ್ತಿರುವ ಉಷಾ(35)ಬಂಧಿತ ಮಹಿಳೆ. ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧೀಸಲಾಗಿದೆ.
ಉಷಾಗೆ ಈಗಾಗಲೆ ಮದುವೆಯಾಗಿದ್ದು, ಪತಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಒಂದುವರೆ ವರ್ಷದ ಹಿಂದೆ ಪತಿ, ಮಕ್ಕಳನ್ನು ತೊರೆದು, ನಯನಕುಮಾರ್ ಜತೆ ವಾಸಿಸುತ್ತಿದ್ದಳು. ಇವರ ಜತೆ ನಯನಕುಮರ್‍ನ ತಾಯಿಯೂ ವಾಸಿಸುತ್ತಿದ್ದರು. ಪತಿ, ಮಕ್ಕಳನ್ನು ತೊರೆದು ತನ್ನ ಪುತ್ರನೊಂದಿಗೆ ವಾಸಿಸುತ್ತಿರುವುದಕ್ಕೆ ನಯನಕುಮಾರ್ ಅವರ ತಾಯಿ, ಮಹಿಳೆ ಜತೆ ಜಗಳವಾಡಿದ್ದಾರೆನ್ನಲಾಗಿದೆ. ಸೋಮವಾರ ರಾತ್ರಿ ನಯನಕುಮಾರ್ ಅವರ ತಾಯಿ ಮಾತ್ರ ಮನೆಯಲ್ಲಿದ್ದ ಸಂದರ್ಭ ಉಷಾ ತನ್ನ ಬಟ್ಟೆ ಹಾಗೂ ಇತರ ಸಾಮಗ್ರಿ ಹೊಂದಿದ್ದ ಬ್ಯಾಗ್ ಹೊರಗಿರಿಸಿ, ಸೀಮೆ ಎಣ್ಣೆ ಸಉರಿದು ಹೆಂಚು ಹಾಸಿದ ಮನೆಗೆ ಬೆಂಕಿ ಹಚ್ಚಿದ್ದಾಳೆ. ಈ ಸಂದರ್ಭ ನಯನಕುಮಾರ್ ತಾಯಿ ಹೊರಕ್ಕೆ ಓಡಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ನಂತರ ಬೊಬ್ಬಿಟ್ಟು ಆಸುಪಾಸಿನವರನ್ನು ಕರೆದು ಬೆಂಕಿ ಶಮನಗೊಳಿಸಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚಿನ ನಷ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ. ನಯನಕುಮರ್ ತಾಯಿ ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.