ಕಾಸರಗೋಡು: ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಮುದ್ರಶಾಸ್ತ್ರ ಮತ್ತು ಸಂಶೋಧನಾ ಕೇಂದ್ರವು (ಐಎನ್‍ಸಿಓಐಎಸ್) ಕೇರಳದಾದ್ಯಂತ ರೆಡ್ ಅಲರ್ಟ್ ಹೊರಡಿಸಿರುವುದರಿಂದ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿನ ಪ್ರವಾಸಿ ಕೇಂದ್ರಗಳ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸುವಂತೆ ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ನಿರ್ದೇಶ ನೀಡಿದ್ದಾರೆ.
ಬಿಆರ್‍ಡಿಸಿಯ ತೇಲುವ ಸೇತುವೆಯ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬೇಕಲ, ಪಳ್ಳಿಕ್ಕರ ಬೀಚ್, ಹೊಸದುರ್ಗ ಕೈಟ್ ಬೀಚ್, ಚೆಂಬರಿಕಾ, ಅಯಿತ್ತಲ, ವಲಿಯಪರಂಬ, ಕಣ್ವತೀರ್ಥ ಬೀಚ್‍ಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಜಾಗ್ರತ ನಿರ್ದೇಶ ಪಾಲಿಸುವಂತೆ ತಿಳಿಸಲಾಗಿದೆ. ಆಯಾ ತಹಸೀಲ್ದಾರ್‍ಗಳು ಮತ್ತು ಶಿಬಿರಕ್ಕೆ ಸಂಬಂಧಿಸಿದ ಇಲಾಖೆಯು ಪ್ರವಾಹ ಸಾಧ್ಯತೆಯಿರುವ ಪ್ರದೇಶಗಳಲ್ಲಿ ಅಗತ್ಯಬಿದ್ದರೆ ಪರಿಹಾರ ಶಿಬಿರಗಳನ್ನು ಪ್ರಾರಂಭಿಸಲು ಈಗಾಗಲೇ ಸಿದ್ಧಪಡಿಸಿರುವ ಸಂಸ್ಥೆಗಳು ಅಥವಾ ಶಾಲೆಗಳಲ್ಲಿ ಮೂಲಸೌಕರ್ಯ ಸ್ಥಾಪಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವೂ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾ ವೈದ್ಯಾಧಿಕಾರಿಗಳು, ಕರಾವಳಿ ಪೆÇಲೀಸ್ ಠಾಣೆಗಳು ಮತ್ತು ಅಗ್ನಿಶಾಮಕ ಠಾಣೆಗಳಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಪ್ರವಾಸಿ ತಾಣವಾಗಿರುವ ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದ್ದಾರೆ.