ನವದೆಹಲಿ: ಹಿಂದೂಗಳನ್ನು ಕ್ರೈಸ್ತರನ್ನಾಗಿ ಅಕ್ರಮವಾಗಿ ಮತಾಂತರಗೊಳಿಸಿದ ಆರೋಪದ ಅಡಿ 'ಸ್ಯಾಮ್ ಹಿಗ್ಗಿನ್‌ಬಾಟಮ್ ಕೃಷಿ, ತಂತ್ರಜ್ಞಾನ ಮತ್ತು ವಿಜ್ಞಾನ ವಿಶ್ವವಿದ್ಯಾಲಯ'ದ ಕುಲಪತಿ ಹಾಗೂ ಇತರರ ವಿರುದ್ಧ ದಾಖಲಿಸಿದ ಎಫ್‌ಐಆರ್ ಆಧರಿಸಿ ಉತ್ತರ ಪ್ರದೇಶದ ವಿಚಾರಣಾ ನ್ಯಾಯಾಲಯದಲ್ಲಿ ನಡೆಯತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಆರೋಪಿಗಳಿಗೆ ಬಂಧನದಿಂದ ರಕ್ಷಣೆ ಹಾಗೂ ಜಾಮೀನು ನೀಡಿರುವ ಸುಪ್ರೀಂ ಕೋರ್ಟ್, ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಯಲು ಅವಕಾಶ ಕೊಡಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಮಂಡಿಸಿದ್ದ ಕೋರಿಕೆಯನ್ನು ಒಪ್ಪಲಿಲ್ಲ.
'ಎಫ್‌ಐಆರ್‌ಗಳ ವಿಚಾರವಾಗಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆಯು ಮುಂದುವರಿಯಬಾರದು' ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಮನೋಜ್ ಮಿಶ್ರಾ ಅವರು ಇದ್ದ ವಿಭಾಗೀಯ ಪೀಠವು ಆದೇಶದಲ್ಲಿ ಹೇಳಿದೆ.
ವಿಶ್ವವಿದ್ಯಾಲಯದ ಕುಲಪತಿ ರಾಜೇಂದ್ರ ಬಿಹಾರಿ ಲಾಲ್ ಮತ್ತು ಇತರರ ವಿರುದ್ಧದ ವಿಚಾರಣೆಗೆ ತಡೆ ನೀಡಬೇಕು ಎಂದು ಅವರ ಪರ ವಕೀಲರು ಮನವಿ ಮಾಡಿದ್ದರು. ಯಾವೊಬ್ಬ ಸಂತ್ರಸ್ತರ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಲ್ಲ ಎಂದು ವಕೀಲರು ಪೀಠಕ್ಕೆ ತಿಳಿಸಿದ್ದರು.