ಪ್ರಯಾಗರಾಜ್: 'ಕೃಷ್ಣ ಜನ್ಮಭೂಮಿ-ಶಾಹೀ ಈದ್ಗಾ ಮಾಲೀಕತ್ವದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ಗೆ ಸುನ್ನಿ ವಕ್ಫ್ ಮಂಡಳಿ ಅಥವಾ ಮಸೀದಿ ಸಮಿತಿಯು ಆಸ್ತಿಯ ಸೂಕ್ತ ದಾಖಲೆ ಸಲ್ಲಿಸುವಲ್ಲಿ ವಿಫಲವಾಗಿದೆ' ಹಿಂದೂ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ.
'ಮಸೀದಿ ಅವರ ಬಳಿ ವಿದ್ಯುತ್ ಸಂಪರ್ಕದ ದಾಖಲೆಯೂ ಇಲ್ಲ. ಅವರು ಅಕ್ರಮವಾಗಿ ವಿದ್ಯುತ್ ಬಳಸುತ್ತಿದ್ದಾರೆ. ಈ ಕುರಿತಂತೆ ವಿದ್ಯುಚ್ಛಕ್ತಿ ಕಂಪನಿಯಿಂದ ಪ್ರಕರಣವೂ ದಖಾಲಾಗಿದೆ' ಎಂದು ಪೀಠದ ಗಮನಕ್ಕೆ ತಂದರು.
ಮಥುರಾದ ಕೃಷ್ಣ ಜನ್ಮೂಭೂಮಿ ದೇವಾಲಯದ ಪಕ್ಕದಲ್ಲಿರುವ ಶಾಹೀ ಈದ್ಗಾ ಮೈದಾನವನ್ನು ತೆರವುಗೊಳಿಸಲು ಕೋರಿ ಸಲ್ಲಿಕೆಯಾದ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಯಿತು.
'1968ರಲ್ಲೇ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಮಸೀದಿ ಸಮಿತಿ ನಡುವೆ ಅಕ್ರಮ ಸಂಧಾನ ನಡೆದಿದೆ. ಆದರೆ ಮಸೀದಿ ಇರುವ ಆಸ್ತಿಯು ಸುಮಾರು ಒಂದು ಸಾವಿರ ವರ್ಷಗಳಿಂದ ಕಾತ್ರಾ ಕೇಶವ ದೇವ್ ಎಂಬುವವರಿಗೆ ಸೇರಿದ್ದಾಗಿದೆ. ಭಗವಾನ್ ಕೃಷ್ಣನ ಜನ್ಮಸ್ಥಳವನ್ನು 16ನೇ ಶತಮಾನದಲ್ಲಿ ನಾಶಗೊಳಿಸಿ, ಆ ಸ್ಥಳದಲ್ಲಿ ಈದ್ಗಾ ನಿರ್ಮಿಸಲಾಗಿದೆ' ಎಂದು ವಕೀಲರು ವಾದಿಸಿದರು.
ಮುಸ್ಲಿಂ ಪರ ವಕೀಲೆ ತಸ್ಲಿಮಾ ಅಜೀಝ್ ಅಹ್ಮದಿ ಅವರು ವಾದ ಮಂಡಿಸಿ, '1968ರ ಅ. 12ರಂದು ನಡೆದ ಸಂಧಾನದ ಖಾತ್ರಿಯಾದದ್ದು 1974ರ ಸಿವಿಲ್ ದಾವೆಯಲ್ಲಿ ಖಚಿತವಾಗಿತ್ತು. ಆದರೆ ಅದು ಕೇವಲ ಮೂರು ವರ್ಷಗಳ ವಾಯ್ದೆ ಹೊಂದಿತ್ತು. ಆದರೆ ಸದ್ಯದ ದಾವೆ 2020ರಲ್ಲಿ ಸಲ್ಲಿಕೆಯಾಗಿದೆ. ಹೀಗಾಗಿ ಆ ದಾವೆಯ ವಾಯ್ದೆ ಮುಗಿದಿದೆ' ಎಂದು ಪೀಠದ ಗಮನಕ್ಕೆ ತಂದರು.
'ಶಾಹೀ ಈದ್ಗಾ ರಚನೆ ತೆರವುಗೊಳಿಸಿದ ನಂತರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಮೊಕದ್ದಮೆ ಹೂಡಲಾಗಿದೆ ಎಂದು ಹಿಂದೂ ಪರ ಅರ್ಜಿಯಲ್ಲಿ ಹೇಳಲಾಗಿದೆ. ಇವರ ಅರ್ಜಿಯಲ್ಲೇ ವಿವಾದಿತ ಜಾಗದಲ್ಲಿ ಈದ್ಗಾ ಇತ್ತು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಜತೆಗೆ ಮಸೀದಿ ನಿರ್ವಹಣಾ ಸಮಿತಿಯು ಅದನ್ನು ನಿರ್ವಹಿಸುತ್ತಿದೆ ಎಂದೂ ಹೇಳಿದೆ' ಎಂದು ವಾದ ಮಂಡಿಸಿದರು.
ವಾದ, ಪ್ರತಿವಾದ ಆಲಿಸಿದ ನ್ಯಾ. ಮಯಾಂಕ್ ಕುಮಾರ್ ಜೈನ್ ಅವರು, ಮೇ 20ಕ್ಕೆ ವಿಚಾರಣೆ ಮುಂದೂಡಿದರು.