ಲಖನೌ: ಅಂಗಡಿ ತೆರೆಯುವ ವಿಚಾರವಾಗಿ ಉಂಟಾದ ವಿವಾದದಲ್ಲಿ ಕಿಡಿಗೇಡಿಗಳ ಗುಂಪೊಂದು ಬಡಿಗೆ, ಇಟ್ಟಿಗೆಗಳಿಂದ ಥಳಿಸಿ, ಅರ್ಚಕರೊಬ್ಬರನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ತೆನುವಾ ಚೌಬೆ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಅಶೋಕ್ ಚೌಬೆ ಕೊಲೆಯಾದವರು.
ಲಖನೌ: ಅಂಗಡಿ ತೆರೆಯುವ ವಿಚಾರವಾಗಿ ಉಂಟಾದ ವಿವಾದದಲ್ಲಿ ಕಿಡಿಗೇಡಿಗಳ ಗುಂಪೊಂದು ಬಡಿಗೆ, ಇಟ್ಟಿಗೆಗಳಿಂದ ಥಳಿಸಿ, ಅರ್ಚಕರೊಬ್ಬರನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ತೆನುವಾ ಚೌಬೆ ಗ್ರಾಮದಲ್ಲಿ ನಡೆದಿದೆ. 60 ವರ್ಷದ ಅಶೋಕ್ ಚೌಬೆ ಕೊಲೆಯಾದವರು.
ಅಶೋಕ್ ಅವರು ತಮ್ಮ ಊರಿನ ಸಮೀಪದ ಗ್ರಾಮ ಬಾರಿಪುರದಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು.
'ಅಶೋಕ್ ತಮ್ಮ ಮನೆ ಪಕ್ಕದಲ್ಲಿಯೇ ಇರುವ ಅಂಗಡಿಯನ್ನು ಮುಚ್ಚುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಹೌಸಲಾ ಪಾಸ್ವಾನ್ ಎಂಬಾತನ ಕುಟುಂಬದ ಕೆಲವರು, ಅಂಗಡಿ ತೆರೆಯುವಂತೆ ಒತ್ತಾಯಿಸಿದ್ದರು. ಅಂಗಡಿ ಮುಚ್ಚುವ ಸಮಯವಾಗಿದೆ ಎಂದು ಹೇಳಿದ್ದ ಅಶೋಕ್, ಅವರ ಮನವಿಯನ್ನು ತಿರಸ್ಕರಿಸಿದ್ದರು. ಈ ವೇಳೆ, ಪಾಸ್ವಾನ್ ಕುಟುಂಬದವರು ಹಾಗೂ ಅಶೋಕ್ ನಡುವೆ ವಾಗ್ವಾದ ನಡೆದಿತ್ತು' ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
'ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದಾಗಿ ಪಾಸ್ವಾನ್ ಕುಟುಂಬದವರು ಬೆದರಿಕೆ ಹಾಕಿದ್ದರಿಂದ, ಈ ಕುರಿತು ಅಶೋಕ್ ಅವರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ' ಎಂದು ತಿಳಿಸಿದ್ದಾರೆ.
'ಮಂಗಳವಾರ ರಾತ್ರಿ ಅಶೋಕ್ ಅವರು ತೆನುವಾ ಚೌಬೆ ಗ್ರಾಮದಲ್ಲಿರುವ ತಮ್ಮ ಮನೆ ಮುಂದೆ ಕುಳಿತಿದ್ದ ವೇಳೆ, 10ಕ್ಕೂ ಹೆಚ್ಚು ದುಷ್ಕರ್ಮಿಗಳಿದ್ದ ಗುಂಪೊಂದು ಅಶೋಕ್ ಅವರ ಮೇಲೆ ಬಡಿಗೆ ಹಾಗೂ ಇಟ್ಟಿಗೆಗಳಿಂದ ದಾಳಿ ನಡೆಸಿತು'
'ತೀವ್ರವಾಗಿ ಗಾಯಗೊಂಡಿದ್ದ ಅಶೋಕ್ ಅವರನ್ನು ಗೋರಖಪುರದ ಆಸ್ಪತ್ರೆಗೆ ದಾಖಲಿಸಲಾಯಿತು. ಗಂಭೀರ ಗಾಯಗಳಿಂದಾಗಿ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರು' ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
'ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಘಟನೆಗೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ' ಎಂದು ತಿಳಿಸಿದ್ದಾರೆ.
ಆಗ್ರಹ: ಸ್ಥಳೀಯ ದೇವಸ್ಥಾನಗಳ ಸಾಧು-ಸಂತರು ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.