ಕೋಲ್ಕತ್ತ (PTI): ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪವನ್ನು ಅಸಂಬಂಧ ನಾಟಕ ಎಂದು ಶುಕ್ರವಾರ ಬಣ್ಣಿಸಿರುವ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು, ಇಂತಹ ಇನ್ನಷ್ಟು ಆರೋಪಗಳು ಎದುರಾಗಬಹುದು ಎಂದು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.
ರಾಜಭವನದ ಗುತ್ತಿಗೆ ಮಹಿಳಾ ನೌಕರರೊಬ್ಬರು ರಾಜ್ಯಪಾಲರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಮರು ದಿನ ಅವರು ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
'ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಮತ್ತು ಹಿಂಸಾಚಾರವನ್ನು ನಿಗ್ರಹಿಸುವ ತನ್ನ ದೃಢ ನಿರ್ಧಾರದ ಪ್ರಯತ್ನಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ' ಎಂದು ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ಉಲ್ಲೇಖಿಸಿ ಹೇಳಿದ್ದಾರೆ.
ಈ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಶುಕ್ರವಾರ ಸ್ಪಷ್ಟಪಡಿಸಿರುವ ಟಿಎಂಸಿ, ಇದರ ಸತ್ಯಾಸತ್ಯತೆ ತಿಳಿಯಲು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.
ಧ್ವನಿಮುದ್ರಿತ ಹೇಳಿಕೆ ಬಿಡುಗಡೆ ಮಾಡಿರುವ ರಾಜ್ಯಪಾಲ ಬೋಸ್ ಅವರು, 'ಕೆಲ ರಾಜಕೀಯ ಶಕ್ತಿಗಳು ನನ್ನ ಮೇಲೆ ಈ ರೀತಿ ಮಾಡಿರುವ ಆರೋಪಗಳನ್ನು ಸ್ವಾಗತಿಸುತ್ತೇನೆ. ಸ್ನೇಹಿತರೇ, ಇಂತಹ ಇನ್ನಷ್ಟು ಆರೋಪಗಳು ಎದುರಾಗಬಹುದು ಎಂಬುದನ್ನು ನಿರೀಕ್ಷಿಸಿದ್ದೇನೆ. ಆದರೆ ಒಂದಂತೂ ಸ್ಪಷ್ಟ. ಇಂಥ ಯಾವುದೇ ಅಸಂಬಂಧ ನಾಟಕಗಳಿಗೆ, ಭ್ರಷ್ಟಾಚಾರವನ್ನು ಬಹಿರಂಗಪಡಿಸುವ ಮತ್ತು ಹಿಂಸಾಚರವನ್ನು ನಿಗ್ರಹಿಸುವ ನನ್ನ ದೃಢವಾದ ಪ್ರಯತ್ನಗಳನ್ನು ತಡೆಯಲು ಆಗುವುದಿಲ್ಲ' ಎಂದು ಹೇಳಿದ್ದಾರೆ.
'ಇನ್ನೂ ದೊಡ್ಡ ಸಂಚಿದೆ':
'ಚಾರಿತ್ರ್ಯ ವಧೆಯು ನಿಮ್ಮ ವಿಫಲ ದುಷ್ಕೃತ್ಯದ ಅಂತಿಮ ಮಾರ್ಗವಾಗಿದೆ' ಎಂದಿರುವ ಬೋಸ್, 'ರಾಜಭವನದಲ್ಲಿ ಇನ್ನೂ ದೊಡ್ಡ ಪ್ರಮಾಣದ ಸಂಚು ರೂಪಿಸಲಾಗಿದೆ' ಎಂದು ಆರೋಪಿಸಿದ್ದಾರೆ.
'ಬಹುಶಃ 1943ರಲ್ಲಿ ಎದುರಾದ ಬಂಗಾಳದ ಕ್ಷಾಮ ಮತ್ತು 1946ರ ಕಲ್ಕತ್ತ ಹತ್ಯೆಗಳಿಗೂ ಮುಂದೊಂದು ದಿನ ನನ್ನನ್ನು ದೋಷಿ ಎನ್ನಬಹುದು' ಎಂದು ಬೋಸ್ ವ್ಯಂಗ್ಯವಾಡಿದ್ದಾರೆ.
ಇದು ಬಿರುಗಾಳಿಯಲ್ಲ:
'ನಾನು ಅನೇಕ ಬಿರುಗಾಳಿಗಳನ್ನು ಎದುರಿಸಿದ್ದೇನೆ. ಈಗಿನದ್ದು ಬಿರುಗಾಳಿಯಲ್ಲ. ಅದು ಟೀ ಕಪ್ಪಿನಲ್ಲಿ ಎದ್ದಿರುವ ಬಿರುಗಾಳಿಯಷ್ಟೇ ಎಂಬುದನ್ನು ನನ್ನ ವಿರುದ್ಧ ಸಂಚು ಮಾಡುತ್ತಿರುವ ರಾಜಕೀಯ ಪಕ್ಷಕ್ಕೆ ಹೇಳಲು ಬಯಸುತ್ತೇನೆ. ನಿಮ್ಮ ಎಲ್ಲ ಅಸ್ತ್ರಗಳನ್ನು ಹೊರತೆಗೆಯಿರಿ. ನಿಮ್ಮ ಶಸ್ತ್ರಾಗಾರವನ್ನು ನನ್ನ ವಿರುದ್ಧ ಬಳಸಿ. ನನ್ನ ಸಹೋದರ, ಸಹೋದರಿಯರ ಘನತೆಗಾಗಿ ಹೋರಾಟ ಮುಂದುವರಿಸಲು ನಾನು ಸಿದ್ಧನಿದ್ದೇನೆ' ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲರ ವಿರುದ್ಧ ದೂರು ಸ್ವೀಕರಿಸಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಖ್ಯಾಂಶಗಳು
* ರಾಜ್ಯಪಾಲರಿಂದ ಧ್ವನಿಮುದ್ರಿತ ಹೇಳಿಕೆ ಬಿಡುಗಡೆ
* ಇನ್ನಷ್ಟು ಆರೋಪಗಳನ್ನು ನಿರೀಕ್ಷಿಸಿದ್ದೇನೆ
* ಭ್ರಷ್ಟಾಚಾರ ಬಹಿರಂಗಪಡಿಸುವ, ಹಿಂಸಾಚರವನ್ನು ನಿಗ್ರಹಿಸುವ ಕಾರ್ಯ ತಡೆಯಲಾಗದು
ರಾಜ್ಯಪಾಲರ ಸ್ಥಾನದ ಪ್ರತಿಷ್ಠೆಗೆ ಧಕ್ಕೆ- ಟಿಎಂಸಿ
ರಾಜ್ಯಪಾಲರ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ಆಘಾತಕಾರಿಯಾದದ್ದು ಇದು ರಾಜಭವನದಲ್ಲಿ ನಡೆದಿದೆ ಎಂಬುದನ್ನು ನಂಬಲು ಆಗುತ್ತಿಲ್ಲ ಎಂದಿರುವ ಟಿಎಂಸಿ ಹಿರಿಯ ನಾಯಕಿ ಮತ್ತು ಕೈಗಾರಿಕಾ ಸಚಿವೆ ಶಶಿ ಪಂಜಾ 'ಇದರ ಹಿಂದೆ ಪಕ್ಷದ ಯಾವುದೇ ಅಜೆಂಡಾ ಮತ್ತು ಪಾತ್ರವಿಲ್ಲ' ಎಂದು ಹೇಳಿದರು. 'ರಾಜ್ಯಪಾಲರ ಮೇಲೆ ಇಂತಹ ಆರೋಪ ಹಿಂದೆಂದೂ ಬಂದಿರಲಿಲ್ಲ. ಇದು ಖಂಡಿತವಾಗಿಯೂ ರಾಜ್ಯಪಾಲರ ಸ್ಥಾನದ ಪ್ರತಿಷ್ಠೆಗೆ ಧಕ್ಕೆ ತಂದಿದೆ. ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು' ಎಂದು ಅವರು ಒತ್ತಾಯಿಸಿದರು. 'ನೀವೂ ಅದೇ ದೋಣಿಯಲ್ಲಿದ್ದೀರಿ': 'ಸಂದೇಶ್‌ಖಾಲಿಗೆ ಹೋಗಿದ್ದ ರಾಜ್ಯಪಾಲರು ಅಲ್ಲಿ ಟಿಎಂಸಿ ನಾಯಕರ ವಿರುದ್ಧ ಮಹಿಳೆಯರು ಮಾಡಿದ ಲೈಂಗಿಕ ಕಿರುಕುಳದ ಆರೋಪಗಳನ್ನು ಆಲಿಸಿದ್ದರು. ಆದರೆ ಈಗ ಅದೇ ವ್ಯಕ್ತಿ ರಾಜಭವನದ ಮಹಿಳಾ ನೌಕರರೊಬ್ಬರು ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಂದರೆ ರಾಜ್ಯಪಾಲರು ಸಹ ಅದೇ ದೋಣಿಯಲ್ಲಿದ್ದಾರೆ' ಎಂದು ಪಂಜಾ ಸುದ್ದಿಗಾರರಿಗೆ ತಿಳಿಸಿದರು. ರಾಜ್ಯಪಾಲರಿಗೆ ಇರುವ ವಿನಾಯಿತಿಗಳನ್ನು ಪ್ರಶ್ನಿಸಿದ ಪಂಜಾ ಅವರು '(ಬಂಗಾಳ) ರಾಜ್ಯಪಾಲರು ಮಾಡಿರುವುದು ಅಪರಾಧ. ಹಾಗಾದರೆ ಈ ವಿನಾಯಿತಿ ಏಕೆ? ಕಾನೂನು ವಿಭಿನ್ನವಾಗಿರಲು ಸಾಧ್ಯವಿಲ್ಲ' ಎಂದರು.
ಸಚಿವೆಗೆ ಪ್ರವೇಶ ನಿರಾಕರಣೆ ತನ್ನ ಮೇಲೆ ಆರೋಪಗಳು ವ್ಯಕ್ತವಾದ ಬೆನ್ನಲ್ಲೇ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು ರಾಜ್ಯ ಹಣಕಾಸು ಸಚಿವೆ ಚಂದ್ರಮಾ ಭಟ್ಟಾಚಾರ್ಯ ಅವರಿಗೆ ರಾಜಭವನ ಪ್ರವೇಶಿಸಲು ಅವಕಾಶ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.