ಮುಳ್ಳೇರಿಯ: ಠೇವಣಿ ವಂಚನಾ ಹಗರಣ ನಡೆದಿರುವ ಮುಳ್ಳೇರಿಯಾದ ಹಣಕಾಸು ಸಂಸ್ಥೆಯೊಂದರಲ್ಲಿ ಠೇವಣಿ ಇರಿಸಿರುವವರಲ್ಲಿ ಎಂಡೋಸಲ್ಫಾನ್ ಸಂತ್ರಸ್ತರೂ ಒಳಗೊಂಡಿದ್ದು, ಇವರಿಗೆ ಚಿಕಿತ್ಸೆಗೂ ಹಣ ಲಭ್ಯವಾಗದೆ ಕಂಗಾಲಾಗಿದ್ದಾರೆ. ಜಿಲ್ಲೆಯ ವಿವಿಧ ಪಂಚಾಯಿತಿ ವ್ಯಾಪ್ತಿಯ ಎಂಡೋಸಲ್ಫಾನ್ ದುಷ್ಪಣಾಮಪೀಡಿತರಿಗೆ ಚಿಕಿತ್ಸಾ ಸಹಾಯಕ್ಕಾಗಿ ಸರ್ಕಾರ ಐದು ಲಕ್ಷ ವರೆಗೆ ಧನಸಹಾಯ ಒದಗಿಸಿತ್ತು. ಈ ಮೊತ್ತವನ್ನು ಸಂತ್ರಸ್ತರು ವಿವಿಧ ಬ್ಯಾಂಕು, ಹಣಕಾಸು ಸಂಸ್ಥೆಗಳಲ್ಲಿ ಠೇವಣಿಯಿರಿಸಿದ್ದಾರೆ. ಕಾರಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತ್ರಸ್ತರಲ್ಲಿ ಕೆಲವರು ಮುಳ್ಳೇರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಣಕಾಸು ಸಂಸ್ಥೆಯೊಂದರಲ್ಲಿ ಠೇವಣಿಯಿರಿಸಿದ್ದರು. ಇತ್ತೀಚೆಗೆ ಸಂಸ್ಥೆ ಸಿಬ್ಬಂದಿಯೇ ಠೇವಣಿ ಹಣ ಎಗರಿಸಿ ಪರಾರಿಯಾಗಿದ್ದು, ಈ ಮೂಲಕ ಠೇವಣಿದಾರರಿಗೆ ಸಂಕಷ್ಟ ಎದುರಾಗಿತ್ತು. ಹಲವು ಮಂದಿ ತಮ್ಮ ಚಿಕಿತ್ಸಾ ವೆಚ್ಚಕ್ಕಾಗಿ ಸಂಗ್ರಹಿಸಿಟ್ಟಿದ್ದ ಮೊತ್ತವೂ ಇದರಲ್ಲಿ ಒಳಗೊಂಡಿತ್ತು. ಹಣ ವಾಪಾಸು ಪಡೆಯಲು ಸಂಸ್ಥೆಗೆ ತೆರಳಿ ಒಂದು ಲಕ್ಷ ರೂ. ಕೇಳಿದರೆ ಒಂದು ಸಾವಿರ ಕೈಗಿತ್ತು ಕಳುಹಿಸಲು ಮುಂದಾಗಿದ್ದಾರೆ!
ಮಧ್ಯ ಪ್ರವೇಶಿಸಿದ ಡಿಸಿ:
ಮುಳ್ಳೇರಿಯಾದ ಹಣಕಾಸು ಸಂಸ್ಥೆಯಲ್ಲಿನ ವಂಚನಾ ಪ್ರಕರಣದಿಂದ ಠೇವಣಿದರರು ಸಂಕಷ್ಟ ಅನುಭವಿಸುವಂತಾಗಿದ್ದು, ಇದರಲ್ಲಿ ಎಂಡೋಸಲ್ಫಾನ್ ಸಂತ್ರಸ್ತರೂ ಒಳಗೊಂಡಿರುವುದು ವ್ಯಾಪಕ ಅಸಮಧಾನಕ್ಕೆ ಕಾರಣವಾಗಿತ್ತು. ದೀರ್ಘ ಕಾಲದ ಹೋರಾಟದ ನಂತರ ಎಂಡೋಸಂತ್ರಸ್ತರಿಗೆ ಸರ್ಕಾರದಿಂದ ಚಿಕಿತ್ಸಾ ಸೌಲಭ್ಯವಾಗಿ ಕೈಸೇರಿದ್ದ ಒಂದಷ್ಟು ಮೊತ್ತವನ್ನು ಪ್ರಸಕ್ತ ಬ್ಯಾಂಕಿನಲ್ಲಿ ಠೇವಣಿಯಿರಿಸಿದ ಹಲವು ಮಂದಿ ಇದ್ದಾರೆ. ಔಷಧ ಖರೀದಿ, ಚಿಕಿತ್ಸೆಗಾಗಿ ಎಂಡೋ ಸಂತ್ರಸ್ತರು ಹಣ ಕೇಳಲು ಸಂಸ್ಥೆಗೆ ತೆರಳಿದರೆ, ಬರಿಗೈಯಲ್ಲಿ ವಾಪಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಮುಳ್ಳೇರಿಯ ಆಸುಪಾಸಿನ ಕೆಲವು ಗ್ರಾಹಕರು ಹಣಕಾಸು ಸಂಸ್ಥೆಯಲ್ಲಿ ಠೇವಣಿಯಿರಿಸಿದ್ದ ತಮ್ಮ ಹಣವನ್ನು ವೈದ್ಯಕೀಯ ಉದ್ದೇಶಕ್ಕಾಗಿ ಹಿಂಪಡೆಯಲು ತೆರಳಿದಾಗ ಇವರಿಗೆ ಶಾಕ್ ಕಾದಿತ್ತು. ಹಣಕ್ಕಾಗಿ ತೆರಳಿದರೆ, ಬರಿಗೈಯಲ್ಲಿ ವಾಪಸಾಗಬೇಕಾದ ಪರಿಸ್ಥಿತಿ ಎದುರಗಿತ್ತು. ಎಂಡೋಸಲ್ಫಾನ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹಲವು ಮಂದಿ ಗ್ರಾಹಕರು ಇದೇ ಹಣಕಾಸು ಸಂಸ್ಥೆಯಲ್ಲಿ ತಮ್ಮ ಹಣ ಜಮೆ ಮಾಡಿದ್ದಾರೆ. ಚಿಕಿತ್ಸೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಹಣಕ್ಕೆ ತೆರಳಿದವರಿಗೆ ಸಂಸ್ಥೆಯಲ್ಲಿ ನೀಡಲು ಹಣವಿಲ್ಲದಿರುವುದರಿಂದ ಕಂಗಾಲಾದ ಗ್ರಾಹಕರು ಮಾಧ್ಯಮಗಳ ಮೂಲಕ ತಮ್ಮ ಅಲವತ್ತುಕೊಂಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮಧ್ಯ ಪ್ರವೇಶಿಸಿ ಎಂಡೋ ಸಂತ್ರಸ್ತರಿಗೆ ಸಮಸ್ಯೆಯಾಗದ ರೀತಿಯಲ್ಲಿ ಅವರ ಹಣ ವಾಪಾಸು ಮಾಡುವಂತೆ ಹಣಕಾಸು ಸಂಸ್ಥೆಗೆ ಆದೇಶ ನೀಡಿದ್ದರು. ಜಿಲ್ಲಾಧಿಕಾರಿ ಸೂಚನೆಯಂತೆ ಸಂಸ್ಥೆಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಕೊನೆಗೂ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಸಲಹೆಯಂತೆ ಬ್ಯಾಂಕ್ ಅಧಿಕಾರಿಗಳು, ಎಂಡೋ ಸಂತ್ರಸ್ತರ ಜತೆ ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ.ಸುರ್ಜಿತ್ ನೇತೃತ್ವದ ಅಧಿಕಾರಿಗಳು ಮಾತುಕತೆ ನಡೆಸಿ ಕೊನೆಗೂ ಒಂದಷ್ಟು ಮೊತ್ತ ಕೈಸೇರುವಂತೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಿಂದ ಠೇವಣಿಯಿರಿಸಿದ ಎಂಡೋ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಲಭಿಸಿದಂತಾಗಿದೆ.