ನವದೆಹಲಿ: ರಾಯ್ ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಅವರ ನಿರ್ಧಾರವನ್ನು ವ್ಯಂಗ್ಯ ಮಾಡಿದ್ದ ಮಾಜಿ ವಿಶ್ವ ಚೆಸ್ ಚಾಂಪಿಯನ್ ರಷ್ಯಾದ ಗ್ಯಾರಿ ಕ್ಯಾಸ್ಪರೋವ್ (garry kasparov) ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಅಮೇಠಿ ಬಿಟ್ಟು ರಾಯ್ ಬರೇಲಿಯಿಂದ ಸ್ಪರ್ಧಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿರುವ ಹಿನ್ನೆಲೆಯಲ್ಲಿ ರಷ್ಯಾದ ಚೆಸ್ ಪಟು ಗ್ಯಾರಿ ಕಾಸ್ಪರೋವ್, 'ಭಾರತೀಯ ರಾಜಕೀಯದ ಕುರಿತಾದ ತಮ್ಮ "ಚಿಕ್ಕ ಜೋಕ್" "ವಕಾಲತ್ತು ಅಥವಾ ಪರಿಣತಿ"ಗಾಗಿ ಹಾದುಹೋಗುವುದಿಲ್ಲ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ಈ ಹಿಂದೆ "ಅಗ್ರಸ್ಥಾನಕ್ಕಾಗಿ ಸವಾಲು ಹಾಕುವ ಮೊದಲು ರಾಯ್ ಬರೇಲಿಯನ್ನು ಮೊದಲು ಗೆಲ್ಲಿರಿ" ಎಂದು ರಾಹುಲ್ ಗಾಂಧಿ ಕುರಿತು ಕ್ಯಾಸ್ಪರೋವ್ ವ್ಯಂಗ್ಯ ಮಾಡಿದ್ದರು. ಈ ಪೋಸ್ಟ್ ವ್ಯಾಪಕ ವೈರಲ್ ಆಗಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ತಮ್ಮ ಪ್ರಮಾದ ಅರಿವಾಗಿ ಕ್ಯಾಸ್ಪರೋವ್ ಸ್ಪಷ್ಟನೆ ನೀಡಿದ್ದಾರೆ. 61 ವರ್ಷ ವಯಸ್ಸಿನ ಕ್ಯಾಸ್ಪರೋವ್ 'ಇದು ಕೇವಲ ತಮಾಷೆ ಮತ್ತು ಅದನ್ನುಜೋಕ್ ಆಗಿ ನೋಡಬೇಕು ಎಂದು ಮನವಿ ಮಾಡಿದ್ದಾರೆ.
ರಾಯ್ ಬರೇಲಿಯಿಂದ ಗೆಲ್ಲಬೇಕು
ಗ್ಯಾರಿ ಕಾಸ್ಪರೋವ್ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಒಂದು ಪೋಸ್ಟ್ನ್ನು ಹಾಕಿಕೊಂಡಿದ್ದರು. ರಾಹುಲ್ ಗಾಂಧಿ ಅವರೇ ನೀವು ಪ್ರಧಾನಿ ಆಗುವ ಕನಸು ಕಾಣುವ ಮೊದಲು ಹೆಚ್ಚಿನ ಸ್ಥಾನದಲ್ಲಿ ರಾಯ್ ಬರೇಲಿಯಿಂದ ಗೆಲ್ಲಬೇಕು ಎಂದು ಗ್ಯಾರಿ ಅವರು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಪುಟಿನ್ ಪ್ರಬಲ ಟೀಕಾಕಾರಾಗಿದ್ದ ಕ್ಯಾಸ್ಪರೋವ್
ಮಾಜಿ ವಿಶ್ವ ಚೆಸ್ ಚಾಂಪಿಯನ್, ಬರಹಗಾರ, ರಾಜಕೀಯ ತಜ್ಞ, ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕ್ಯಾಸ್ಪರೋವ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ರಾಜಕೀಯ ವಿಮರ್ಶಕರು. ಇವರು ಒಂದು ಸಂಧರ್ಭದಲ್ಲಿ ಪುಟಿನ್ ಅವರನ್ನು ವಿಶ್ವದ ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಕರೆದಿದ್ದರು.