ಕೊಟ್ಟಾಯಂ: ದೇವಸ್ಥಾನಗಳನ್ನು ನಾಸ್ತಿಕ ದೊರೆಗಳಿಂದ ಮುಕ್ತಗೊಳಿಸಿ ಹಿಂದೂಗಳಿಗೆ ಹಸ್ತಾಂತರಿಸಬೇಕೆಂದು ಅಖಿಲ ಕೇರಳ ಹಿಂದೂ ಚೇರಮಾರ್ ಮಹಾಸಭಾ ರಾಜ್ಯಾಧ್ಯಕ್ಷ ಪಿ. ಪ್ರಸಾದ್ ಆಗ್ರಹಿಸಿದರು. ದೇವಸ್ಥಾನದ ಆಸ್ತಿಗಳು ಸರ್ಕಾರ ಮತ್ತು ದೇವಸ್ವಂ ಮಂಡಳಿಗಳ ಒಡೆತನದಲ್ಲಿದ್ದು, ಧಾರ್ಮಿಕ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿವೆ. ಹಿಂದೂ ನಂಬಿಕೆಗಳು ಮತ್ತು ದೇವಾಲಯಗಳನ್ನು ನಿರ್ಮೂಲನೆ ಮಾಡುವುದು ಇದರ ಹಿಂದಿನ ಗುರಿಯಾಗಿದೆ.
ಶಬರಿಮಲೆ ದರ್ಶನಕ್ಕೆ ಶುಲ್ಕ ವಿಧಿಸುವ ಕ್ರಮ ಸ್ವೀಕಾರಾರ್ಹವಲ್ಲ. ಇತರ ಧಾರ್ಮಿಕ ಪೂಜಾ ಸ್ಥಳಗಳನ್ನು ಆಯಾ ಭಕ್ತರು ನಿರ್ವಹಿಸುತ್ತಾರೆ. ಹಿಂದೂ ದೇವಾಲಯಗಳಲ್ಲಿ ಮಾತ್ರ ಸರ್ಕಾರ ಮತ್ತು ಅನ್ಯಧರ್ಮೀಯರು ಒಳನುಗ್ಗಿ ಆಡಳಿತ ನಡೆಸುತ್ತಿರುವುದು ಹಿಂದೂಗಳಿಗೆ ಸವಾಲಾಗಿದೆ. ಶಬರಿಮಲೆ ದೇಗುಲ ದರ್ಶನಕ್ಕೆ ಶುಲ್ಕ ವಿಧಿಸಿರುವುದು ಹಿಂದೂಗಳಿಗೆ ಮಾಡುತ್ತಿರುವ ಅನ್ಯಾಯ.
ದೇವಸ್ವಂ ಮಂಡಳಿಗಳ ಮೇಲ್ವಿಚಾರಣೆಯಲ್ಲಿ ಕೆಲವು ಬೃಹತ್ ದೇವಾಲಯಗಳ ಭೂಮಿಯನ್ನು ಸಾರ್ವಜನಿಕ ಪಾಕಿರ್ಂಗ್ ಸ್ಥಳಗಳಿಗೆ ಹರಾಜು ಮಾಡುವ ಮೂಲಕ ಸರ್ಕಾರಕ್ಕೆ ಆದಾಯವನ್ನು ಗಳಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ದೇವಸ್ಥಾನದ ಜಮೀನಿನಲ್ಲಿ ಪೆಟ್ರೋಲ್ ಪಂಪ್ ಸ್ಥಾಪಿಸಿ ಮಾರಾಟಗಾರರಿಗೆ ನೀಡುವ ಮೂಲಕ ದೇವಸ್ಥಾನದ ಆಸ್ತಿ ಸಾರ್ವಜನಿಕ ಆಸ್ತಿ ಎಂಬ ಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ. ಇದು ಯೋಗ್ಯವಾಗಿಲ್ಲ. ಈ ಕ್ರಮವನ್ನು ಹಿಂದೂ ಸಮುದಾಯ ತೀವ್ರವಾಗಿ ವಿರೋಧಿಸಲಿದೆ. ಸರಕಾರ ಹಾಗೂ ದೇವಸ್ವಂ ಮಂಡಳಿಗಳು ತಳೆದಿರುವ ಹಿಂದೂ ವಿರೋಧಿ ಧೋರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು.