ಕುಂಬಳೆ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಪೆರ್ಮುದೆ ಘಟಕದ ಮಹಾಸಭೆ ಪೆರ್ಮುದೆ ಶಾಲೆಯಲ್ಲಿ ಗುರುವಾರ ನಡೆಯಿತು. ಎ.ವೈ. ಅಬ್ಬಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶೆರೀಪ್ ಉದ್ಘಾಟಿಸಿ ಮಾತನಾಡಿದರು. ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಕೆ. ಜೆ. ಸಜಿ ಅವರು ಮಾತನಾಡಿ, ಪ್ರಸ್ತುತ ವ್ಯಾಪಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ತಿಳಿಯಪಡಿಸಿದರು.
ಈ ಸಂದರ್ಭ 2024_2026 ಆವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು, ನೂತನ ಅಧ್ಯಕ್ಷರಾಗಿ ಎ.ವೈ. ಅಬ್ಬಾಸ್ ಅವರನ್ನು ಆರಿಸಲಾಯಿತು. ಉಪಾಧ್ಯಕ್ಷರಾಗಿ ವಿಠಲ ಹಾಗೂ ವಿಜಯಕುಮಾರ್, ಕಾರ್ಯದರ್ಶಿಯಾಗಿ ಜಯಪ್ರಕಾಶ ಕೆ, ಜೊತೆ ಕಾರ್ಯದರ್ಶಿಯಾಗಿ ಪ್ರವೀಣ್ ಕ್ರಾಸ್ತ ಮತ್ತು ಬಿ.ಎ.ಲತೀಪ್ ಆಯ್ಕೆಯಾದರು. ಖಜಾಂಜಿಯಾಗಿ ಅಬ್ಬಾಸ್ ಸುಪಾರಿ ಆಯ್ಕೆಯಾದರು. ಅಲ್ಲದೆ 7 ಸದಸ್ಯರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು. ನಂತರ ಕೆ.ಜೆ. ಸಜಿ ಪ್ರತಿಜ್ಞೆ ಬೋಧಿಸಿ ಅಧಿಕಾರ ಜವಾಬ್ದಾರಿ ನೀಡಿದರು. ವಿಜಯ ಕುಮಾರ್ ಸ್ವಾಗತಿಸಿ, ವಂದಿಸಿದರು.
ನೂತನ ಸಮಿತಿ ಪೆರ್ಮುದೆಯ ಪೇಟೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಮತ್ತು ಬಸ್ಸು ತಂಗುದಾಣ ಇಲ್ಲದೆ ಮಕ್ಕಳು,ಮಹಿಳೆಯರು ಹಾಗೂ ಹಿರಿಯ ನಾಗರಿಕರು ಆತೀವ ತೊಂದರೆಯನ್ನು ಅನುಭವಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು. ಅಲ್ಲದೆ ಅಂಗಡಿಗಳ ಮುಂದೆ ಅಸಮರ್ಪಕವಾಗಿ ಅಗೆದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಶೀಘ್ರ ಸರಿಪಡಿಸಲು ಸಂಬಂಧ ಪಟ್ಟ ಆಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಲಾಗಿದೆ.