ನವದೆಹಲಿ: ಪ್ರಚಾರದ ವೇಳೆ ದ್ವೇಷಪೂರಿತ ಭಾಷಣಗಳನ್ನು ಮಾಡಿದ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ಸಿ ಶರ್ಮಾ ಅವರಿದ್ದ ಪೀಠವು, ಅರ್ಜಿದಾರರಿಗೆ ದೂರು ಪರಿಹಾರಕ್ಕಾಗಿ ಮೊದಲು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಲು ಕೇಳಿದೆ.
'ಅಧಿಕಾರಿಗಳನ್ನು ಸಂಪರ್ಕಿಸಿದ್ದೀರಾ ಎಂದು ಅರ್ಜಿದಾರರನ್ನು ಪ್ರಶ್ನಿಸಿದ ಪೀಠವು, ರಿಟ್ ಆಫ್ ಮ್ಯಾಂಡಮಸ್‌ಗಾಗಿ ನೀವು ಮೊದಲು ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬೇಕು' ಎಂದು ಹೇಳಿದೆ.
ಬಳಿಕ ಅರ್ಜಿದಾರರು ತಮ್ಮ ಮನವಿಯನ್ನು ಹಿಂತೆಗೆದುಕೊಂಡರು. ಬಳಿಕ ಪೀಠವು, ಅರ್ಜಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ವಜಾಗೊಳಿಸಿತು.