HEALTH TIPS

ರಾಮಮಂದಿರ ತೀರ್ಪನ್ನು ಕಾಂಗ್ರೆಸ್ ಬದಲಿಸುತ್ತದೆ- ನರೇಂದ್ರ ಮೋದಿ

             ಧಾರ್/ಖರ್ಗೋನ್/ಬೀಡ್ (PTI): ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ, 1985ರಲ್ಲಿ ರಾಜೀವ್ ಗಾಂಧಿ ಸರ್ಕಾರವು ಶಾ ಬಾನೊ ಪ್ರಕರಣದ ತೀರ್ಪನ್ನು ಅನೂರ್ಜಿತಗೊಳಿಸಿದಂತೆ ಅಯೋಧ್ಯೆ ರಾಮಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನೂ ಬದಲಾಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.

           ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, 'ರಾಮಮಂದಿರ ಪ್ರಕರಣಕ್ಕೆ ಸಂಬಂಧಪಟ್ಟಂತೆ 2019ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ 'ಶಹಜಾದ' (ರಾಹುಲ್‌ ಗಾಂಧಿ) ಆಯ್ದ ಕೆಲವರ ಸಭೆ ಕರೆದಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ತಮ್ಮ ತಂದೆ ಶಾ ಬಾನೊ ಪ್ರಕರಣದಲ್ಲಿ ಮಾಡಿದಂತೆ ತಾನು ಅಯೋಧ್ಯೆ ತೀರ್ಪನ್ನೂ ಬದಲಿಸುವುದಾಗಿ ಹೇಳಿದ್ದರು ಎಂದು ಇತ್ತೀಚೆಗೆ ಕಾಂಗ್ರೆಸ್ ತೊರೆದ ಮುಖಂಡರೊಬ್ಬರು ತಿಳಿಸಿದ್ದರು' ಎಂದು ಮೋದಿ ನುಡಿದರು.

             ವೋಟ್ ಜಿಹಾದ್ ಹಾಗೂ ಕಾಂಗ್ರೆಸ್‌ ಮುಖಂಡ ವಿಜಯ್ ವಡೆಟ್ಟೀವಾರ್ ಅವರ ಆರೋಪಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, '2008ರಲ್ಲಿ ಮುಂಬೈ ಪ್ರವೇಶಿಸಿ, ಅಪಾರ ಹಾನಿ ಸೃಷ್ಟಿಸಿದ್ದ ಹತ್ತು ಉಗ್ರರು ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದರು' ಎಂದು ‌ಗಂಭೀರ ಆರೋಪ ಮಾಡಿದರು.

              'ಆ ಸಂಬಂಧವನ್ನು ಏನೆಂದು ಕರೆಯುತ್ತಾರೆ ಎಂದು ಜನ ಕಾಂಗ್ರೆಸ್ ಅನ್ನು ಕೇಳುತ್ತಿದ್ದಾರೆ' ಎಂದರು.

              'ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉಗ್ರರಿಗೆ ಪ್ರಧಾನ ಮಂತ್ರಿ ಮನೆಯಲ್ಲಿ ಸ್ವಾಗತ ಕೋರಲಾಗುತ್ತಿತ್ತು. ಬಾಟ್ಲಾ ಹೌಸ್ ಎನ್‌ಕೌಂಟರ್ ನಂತರ ಕಾಂಗ್ರೆಸ್‌ನ ಪ್ರಮುಖ ನಾಯಕರೊಬ್ಬರು ಕಣ್ಣೀರು ಸುರಿಸಿದ್ದರು. ಕಾಂಗ್ರೆಸ್ ಆ ಹಳೆಯ ದಿನಗಳನ್ನು ವಾಪಸ್ ತರಲು ಹೊರಟಿದೆಯೇ? ಆದರೆ, ಮೋದಿ ನಿಮ್ಮ ಮುಂದೆ ಬಂಡೆಯಂತೆ ನಿಂತಿದ್ದಾರೆ' ಎಂದು ತಿಳಿಸಿದರು.

             ಮಧ್ಯಪ್ರದೇಶದ ಧಾರ್‌ನಲ್ಲಿ ಚುನಾವಣಾ ರ್‍ಯಾಲಿ ನಡೆಸಿದ ಅವರು, 'ಕಾಂಗ್ರೆಸ್ ಪಕ್ಷವು ಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಗೆ ತರದಿರಲು ಹಾಗೂ ಅಯೋಧ್ಯೆ ರಾಮಮಂದಿರಕ್ಕೆ 'ಬಾಬ್ರಿ ಬೀಗ' ಹಾಕದಿರಲು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ 400 ಸ್ಥಾನಗಳು ಬೇಕು' ಎಂದರು.

              ' ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷವು ಕಡೆಗಣಿಸಿತ್ತು. ಸಂವಿಧಾನ ರಚನೆಯಲ್ಲಿ ಅವರ ಪಾತ್ರ ಅತ್ಯಲ್ಪ ಎಂದು ಹೇಳತೊಡಗಿತ್ತು. ಕಾಂಗ್ರೆಸ್ ಪರಿವಾರವು ಅಂಬೇಡ್ಕರ್ ಅವರನ್ನು ವಿಪರೀತವಾಗಿ ದ್ವೇಷಿಸುತ್ತದೆ' ಎಂದು ಆರೋಪಿಸಿದರು.

                'ಕಾಂಗ್ರೆಸ್, ದೇಶದ ಖಾಲಿ ಭೂಮಿ ಮತ್ತು ದ್ವೀಪಗಳನ್ನು ವಿದೇಶಗಳಿಗೆ ನೀಡದಿರಲು, ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ತನ್ನ ಮತಬ್ಯಾಂಕ್‌ಗೆ ನೀಡದಿರಲು ಮತ್ತು ತನ್ನ ಮತಬ್ಯಾಂಕ್‌ನ ಎಲ್ಲ ಜಾತಿಗಳೂ ಒಬಿಸಿ ಎಂದು ಘೋಷಿಸದಿರುವಂತೆ ಮಾಡಲು ಮೋದಿ ನಿಮ್ಮಲ್ಲಿ 400 ಸ್ಥಾನಗಳನ್ನು ಕೇಳುತ್ತಿದ್ದಾರೆ' ಎಂದು ಹೇಳಿದರು.

              'ನಕಲಿ ಮತ್ತು ಹುಸಿ ಜಾತ್ಯತೀತತೆಯ ಹೆಸರಿನಲ್ಲಿ ಭಾರತದ ಅಸ್ತಿತ್ವವನ್ನು ಅಳಿಸಿಹಾಕಲು ಮೋದಿ ಬದುಕಿರುವವರೆಗೆ ಬಿಡುವುದಿಲ್ಲ' ಎಂದು ಶಪಥ ಮಾಡಿದರು.

              'ಈ ಕುಟುಂಬವಾದಿ ಜನ ಮೊದಲು ದೇಶದ ಚರಿತ್ರೆಯನ್ನು ತಿರುಚಿದರು ಮತ್ತು ದೇಶದ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ಪುತ್ರರನ್ನು ಮರೆಯುವಂತೆ ಮಾಡಿದರು' ಎಂದು ಆರೋಪಿಸಿದರು.

ಪ್ರಧಾನಿ ಮಾತು..

* ಭಾರತವು ಇತಿಹಾಸದ ಒಂದು ಘಟ್ಟ ತಲುಪಿದ್ದು, ದೇಶವನ್ನು ಮುಂದಕ್ಕೊಯ್ಯಬೇಕಿರುವುದು 'ವೋಟ್ ಜಿಹಾದ್' ಅಥವಾ 'ರಾಮ ರಾಜ್ಯವೊ' ಎಂಬುದನ್ನು ಲೋಕಸಭಾ ಚುನಾವಣೆಯಲ್ಲಿ ನಿರ್ಧರಿಸಬೇಕಿದೆ.

* ವೋಟ್ ಜಿಹಾದ್ ಕಲ್ಪನೆಯನ್ನು ನೀವು ಒಪ್ಪಿಕೊಳ್ಳುವಿರೇ, ಪ್ರಜಾಪ್ರಭುತ್ವದಲ್ಲಿ ಇದು ಸಾಧ್ಯವೇ, ಭಾರತದ ಸಂವಿಧಾನವು ಇದಕ್ಕೆಲ್ಲಾ ಸಮ್ಮತಿಸುವುದೇ?

* ಪಾಕಿಸ್ತಾನದ ಬಗ್ಗೆ ಪ್ರೀತಿ ತೋರುವ ಮೂಲಕ ತಮ್ಮ ಮತಬ್ಯಾಂಕ್ ಅನ್ನು ಧ್ರುವೀಕರಣ ಮಾಡಬಹುದು ಎಂದು ಭಾವಿಸಿದ್ದಾರೆ. ಆದರೆ, ಅವರು ತಮ್ಮ ಠೇವಣಿ ಉಳಿಸಿಕೊಳ್ಳುವುದೂ ಕೂಡ ಕಷ್ಟವಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries