ನವದೆಹಲಿ: 14 ವರ್ಷ ವಯಸ್ಸಿನ ಬಾಲಕಿಯೊಬ್ಬಳ ನಗ್ನ ವಿಡಿಯೊ ಚಿತ್ರೀಕರಿಸಿ, ಅದನ್ನು ಇತರರಿಗೆ ರವಾನಿಸಿದ ಆರೋಪ ಎದುರಿಸುತ್ತಿರುವ ಬಾಲಕನಿಗೆ ಜಾಮೀನು ನಿರಾಕರಿಸಿದ ಉತ್ತರಾಖಂಡ ಹೈಕೋರ್ಟ್‌ನ ತೀರ್ಮಾನದಲ್ಲಿ ಮಧ್ಯಪ್ರವೇಶ ಮಾಡದಿರಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಈ ಬಾಲಕಿಯು ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಹೈಕೋರ್ಟ್ ಏಪ್ರಿಲ್ 1ರಂದು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಬಾಲಕನು ತನ್ನ ತಾಯಿಯ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪಂಕಜ್ ಮಿತ್ತಲ್ ಅವರು ಇದ್ದ ವಿಭಾಗೀಯ ಪೀಠವು ವಜಾಗೊಳಿಸಿತು. ಕಾನೂನಿನ ಜೊತೆ ಸಂಘರ್ಷಕ್ಕೆ ಗುರಿಯಾಗಿರುವ ಈ ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ) ಅಡಿ ಹರಿದ್ವಾರ ಜಿಲ್ಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದಲ್ಲಿ ಜಾಮೀನು ನೀಡಲು ನಿರಾಕರಿಸಿದ ಉತ್ತರಾಖಂಡ ಹೈಕೋರ್ಟ್ ಮತ್ತು ಬಾಲನ್ಯಾಯ ಮಂಡಳಿಯ ತೀರ್ಮಾನವನ್ನು ಪ್ರಶ್ನಿಸಿ ಈ ಬಾಲಕ ಸುಪ್ರೀಂ ಕೋರ್ಟ್ ಮೊರೆಹೋಗಿದ್ದ. ಕಳೆದ ವರ್ಷ ಅಕ್ಟೋಬರ್ 22ರಂದು ಮನೆಯಿಂದ ಕಾಣೆಯಾಗಿದ್ದ ಬಾಲಕಿ ನಂತರ ಶವವಾಗಿ ಪತ್ತೆಯಾಗಿದ್ದಳು ಎಂಬ ಅಂಶವನ್ನು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಬಾಲಕನು, ಆ ಬಾಲಕಿಯ ನಗ್ನ ವಿಡಿಯೊ ಚಿತ್ರೀಕರಿಸಿದ್ದ, ಅದನ್ನು ವಿದ್ಯಾರ್ಥಿಗಳ ನಡುವೆ ಹಂಚಿದ್ದ. ಇದನ್ನು ಸಹಿಸಲು ಸಾಧ್ಯವಾಗದೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಳು ಎಂಬ ಉಲ್ಲೇಖ ಕೂಡ ಆದೇಶದಲ್ಲಿ ಇದೆ. ಆ ಬಾಲಕಿಯು, ಬಾಲಕನ ಸಹಪಾಠಿಯಾಗಿದ್ದಳು.