ಕೋಲ್ಕತ್ತ: ಬಾಂಗ್ಲಾದೇಶದ ಅವಾಮಿ ಲೀಗ್ ಪಕ್ಷದ ಸಂಸದ ಅನ್ವರುಲ್ ಅಜೀಂ ಅನಾರ್ ಹತ್ಯೆಗೆ ಅವರ ಆಪ್ತ ಸ್ನೇಹಿತನೇ ₹5 ಕೋಟಿ ಹಣ ಪಾವತಿಸಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪಶ್ಚಿಮ ಬಂಗಾಳದ ಸಿಐಡಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣದ ತನಿಖೆಯನ್ನು ರಾಜ್ಯ ಸಿಐಡಿ ಕೈಗೆತ್ತಿಕೊಂಡಿದೆ. 'ಇದೊಂದು ಯೋಜಿತ ಹತ್ಯೆ. ಅನ್ವರುಲ್ ಅವರ ಆಪ್ತರಾದ ಅಮೆರಿಕದಲ್ಲಿರುವ ಪ್ರಜೆಯೊಬ್ಬರು ಸುಮಾರು ₹5 ಕೋಟಿ ಹಣ ಪಾವತಿಸಿ ಅನ್ವರುಲ್ ಅವರನ್ನು ಹತ್ಯೆ ಮಾಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಅನ್ವರುಲ್ ಅವರ ಸ್ನೇಹಿತ, ಅಮೆರಿಕದಲ್ಲಿ ನೆಲೆಸಿರುವ ವ್ಯಕ್ತಿ ಕೋಲ್ಕತ್ತದ ನ್ಯೂ ಟೌನ್ ಪ್ರದೇಶದಲ್ಲಿ ಫ್ಲಾಟ್ ಹೊಂದಿದ್ದಾರೆ. ಚಿಕಿತ್ಸೆ ಪಡೆಯುವ ಸಲುವಾಗಿ ಕೋಲ್ಕತ್ತಕ್ಕೆ ಬಂದಿದ್ದ ಅನ್ವರುಲ್ ಕೊನೆ ಬಾರಿಗೆ ಈ ಫ್ಲ್ಯಾಟ್‌ಗೆ ಪ್ರವೇಶಿಸಿದ್ದರು. ಈ ಫ್ಲಾಟ್ ಅನ್ನು ಅಮೆರಿಕ ಪ್ರಜೆ, ಪಶ್ಚಿಮ ಬಂಗಾಳದ ಅಬಕಾರಿ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ತನ್ನ ಸ್ನೇಹಿತನಿಗೆ ಬಾಡಿಗೆಗೆ ನೀಡಿದ್ದರು ಎಂದು ಅವರು ಮಾಹಿತಿ ನೀಡಿದರು.
'ಅನ್ವರುಲ್ ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ವಿಶ್ವಾಸಾರ್ಹ ಮಾಹಿತಿ ಲಭಿಸಿದೆ. ಆದರೆ, ಇನ್ನೂ ಮೃತ ದೇಹವನ್ನು ವಶಪಡಿಸಿಕೊಂಡಿಲ್ಲ' ಎಂದು ಸಿಐಡಿ ಐಜಿ ಅಖಿಲೇಶ್ ಚತುರ್ವೇದಿ ಅವರು ಬುಧವಾರ ಹೇಳಿಕೆ ನೀಡಿದ್ದರು.
ಕೋಲ್ಕತ್ತದ ಹೊರವಲಯದ ನ್ಯೂ ಟೌನ್‌ನಲ್ಲಿರುವ ಐಷಾರಾಮಿ ಕಾಂಡೋಮಿನಿಯಂ ಅಪಾರ್ಟ್‌ಮೆಂಟ್‌ನಲ್ಲಿ ಪೊಲೀಸರಿಗೆ ರಕ್ತದ ಕಲೆಗಳು ಸಿಕ್ಕಿವೆಯೇ? ಮೇ 13 ರಂದು ಸಂಸದರು ಕೊನೆ ಬಾರಿಗೆ ಕಾಣಿಸಿದ ಸ್ಥಳ ಪತ್ತೆಯಾಗಿದೆಯೇ ಎಂದು ಕೇಳಲಾದ ಪ್ರಶ್ನೆಗೆ, 'ನಮ್ಮ ವಿಧಿವಿಜ್ಞಾನ ತಂಡವು ಅಪರಾಧ ಕೃತ್ಯದ ಶಂಕಿತ ಸ್ಥಳವನ್ನು ಪರಿಶೀಲಿಸುತ್ತಿದೆ' ಎಂದು ಚತುರ್ವೇದಿ ಪ್ರತಿಕ್ರಿಯಿಸಿದ್ದರು.
-ಅಸಾದುಝಮಾನ್ ಖಾನ್, ಬಾಂಗ್ಲಾದೇಶದ ಗೃಹ ಸಚಿವ ಮೇ 13 ರಂದು ಕೋಲ್ಕತ್ತದಲ್ಲಿ ನಾಪತ್ತೆಯಾಗಿದ್ದ ಅನ್ವರುಲ್ ಅಜೀಂ ಅನಾರ್ ಹತ್ಯೆಯಾಗಿದ್ದು ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆಉಸಿರುಗಟ್ಟಿಸಿ ಕೊಂದು ತುಂಡು ಮಾಡಿ ಎಸೆದ ಶಂಕೆ
ಸಂಸದ ಅನಾರ್ ಅವರನ್ನು ಹಂತಕರು ಮೊದಲು ಕತ್ತು ಹಿಸುಕಿ ಕೊಂದು ನಂತರ ಅವರ ಮೃತ ದೇಹವನ್ನು ವಿರೂಪಗೊಳಿಸಿ ಹಲವು ತುಂಡುಗಳಾಗಿ ಕತ್ತರಿಸಿರುವುದು ಪುರಾವೆಗಳಿಂದಾಗಿ ಗೊತ್ತಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ. ನ್ಯೂ ಟೌನ್‌ನ ಐಷಾರಾಮಿ ಕಾಂಡೋಮಿನಿಯಂ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ಸಿಐಡಿಯು ಪತ್ತೆಹಚ್ಚಿದೆ.
ಶವದ ತುಂಡುಗಳ ವಿಲೇವಾರಿಗೆ ಬಳಸಿರುವ ಶಂಕೆ ಇರುವ ಹಲವು ಪ್ಲಾಸ್ಟಿಕ್ ಚೀಲಗಳನ್ನು ಸಹ ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. 'ಶವವನ್ನು ತುಂಡುತುಂಡಾಗಿಸಿ ಬಹುಶಃ
ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವ ಶಂಕೆ ಇದೆ.
ಇನ್ನು ಕೆಲವು ಭಾಗಗಳನ್ನು ರೆಫ್ರಿಜಿರೇಟರ್‌ನಲ್ಲಿ ಇರಿಸಿರುವ ಅನುಮಾನವೂ ಇದೆ. ನಾವು ಅವುಗಳ ಮಾದರಿಗಳನ್ನು ಸಂಗ್ರಹಿಸಿದ್ದೇವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.