ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರ ತಾಯಂದಿರು ಕಳೆದ ನಾಲ್ಕು ತಿಂಗಳಿಂದ ರಸ್ತೆಬದಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರ ಕಂಡೂಕಾಣದಂತೆ ವರ್ತಿಸುವ ಮೂಲಕ ಸರ್ಕಾರ ಎಂಡೋಸಂತ್ರಸ್ತರನ್ನು ಕಾಲಕಸವಾಗಿ ಪರಿಗಣಿಸಿರುವುದು ಖಂಡನೀಯ ಎಂದು ಖ್ಯಾತ ಕಲಾವಿದೆ, ಸಮಾಜಸೇವಕಿ ಸುಲೋಚನಾ ಮಾಹಿ ತಿಳಿಸಿದ್ದಾರೆ.
ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ಎದುರು ಕಳೆದ ನಾಲ್ಕು ತಿಂಗಳಿಂದ ನಡೆಯುತ್ತಿರುವ ಎಂಡೋ ಸಂತ್ರಸ್ತರ ಮುಷ್ಕರಕ್ಕೆ ಬೆಂಬಲ ಸೂಚಿಸಿ ಆಯೋಜಿಸಲಾಗಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರ ತಾಯಂದಿರು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಎಚ್ಚರಿಕೆ ಸಂದೇಶವಾಗಿ ಪರಿಗಣಿಸಬೇಕು. ಯಾವುದೇ ಸರ್ಕಾರಕ್ಕೂ ತಾಯಂದಿರ ಕಣ್ಣೀರಿಗೆ ತಲೆಬಾಗಬೇಕಾದ ಪರಿಸ್ಥಿತಿ ಬಂದೇ ಬರಲಿದೆ. ಈ ನಿಟ್ಟಿನಲ್ಲಿ ತಾಯಂದಿರ ಹೋರಾಟವನ್ನು ಲಘುವಾಗಿ ಪರಿಗಣಿಸದೆ, ಅವರ ಬೇಡಿಕೆ ಈಡೇರಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ನೇತಾರೆ ಶಾಂತಮ್ಮ ಫಿಲಪ್ ಮುಖ್ಯ ಭಾಷಣ ಮಾಡಿ, ಅಸಹಾಯಕ ತಾಯಂದಿರು ನಡೆಸುತ್ತಿರುವ ಹೋರಾಟವನ್ನು ಸರಕಾರ ಕಡೆಗಣಿಸಿರುವುದು ಸರಿಯಾದ ಕ್ರಮವಲ್ಲ ತಾಯಂದಿರ ಹೋರಾಟಕ್ಕೆ ಶಕ್ತಿ ತುಂಬಲು ಅವರ ಜೊತೆ ಸದಾ ಬೆಂಬಲವಾಗಿ ನಿಲ್ಲಲಿದ್ದೇವೆ ಎಂದು ಭರವಸೆ ನೀಡಿದರು. ನೂರ್ ಆಯಿಶಾ, ಶೋಭನಾ ನೀಲೇಶ್ವರಂ, ಪ್ರಸೀದಾ ಕರಿವೆಲ್ಲೂರ್, ನಸೀಮಾ ತೈಕಡಪ್ಪುರಂ, ಸತಿದೇವಿ ಎರಮಮ್, ಪ್ರಮೀಳಾ ಚಂದ್ರನ್ ಉಪಸ್ಥಿತರಿದ್ದರು. ಪಿ. ಶೈನಿ ಸ್ವಾಗತಿಸಿದರು. ಸರಸ್ವತಿ ವಂದಿಸಿದರು.