ನವದೆಹಲಿ: ಕಾಂಗ್ರೆಸ್ ಪಕ್ಷವು ರಾಮ ಮಂದಿರದ ಮೇಲೆ ಬುಲ್ಡೋಜರ್ ಹತ್ತಿಸುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪವು ಸಂಪೂರ್ಣ ಸುಳ್ಳು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದರು. 'ಕಾಂಗ್ರೆಸ್ ಪಕ್ಷವು 55 ವರ್ಷಗಳ ಕಾಲ ಈ ದೇಶವನ್ನು ಆಳಿದೆ.
ಪಿಟಿಐ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, 'ಬಿಜೆಪಿಯವರು ಯಾವಾಗಲೂ ಹೀಗೆಯೇ ಮಾತನಾಡುತ್ತಾರೆ. ಬಡವರಿಗೆ ಸಹಾಯಹಸ್ತ ಚಾಚುವುದನ್ನು ಬಿಜೆಪಿಯು ಓಲೈಕೆ ಎನ್ನುತ್ತದೆ. ನಮ್ಮ ಯುಪಿಎ ಸರ್ಕಾರವು ನರೇಗಾವನ್ನು ತಂದಾಗಲೂ ಆಹಾರ ಭದ್ರತಾ ಕಾಯ್ದೆ ಪರಿಚಯಿಸಿದಾಗಲೂ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆ ರೂಪಿಸಿದಾಗಲೂ ಬಿಜೆಪಿ ಈ ಎಲ್ಲವನ್ನೂ ವಿರೋಧಿಸಿದೆ. ಭೂ ಸುಧಾರಣೆ ಹಾಗೂ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದಾಗಲೂ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು' ಎಂದರು.
ಧರ್ಮದ ಆಧಾರದಲ್ಲಿ ಕಾಂಗ್ರೆಸ್ ಪಕ್ಷವು ಮೀಸಲಾತಿ ನೀಡಲು ಬಯಸಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, 'ಈಗ ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಮಿತಿ ಇದೆ. ಹಾಗಾದರೆ, ಅಲ್ಲಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗಿದೆಯೇ? ತಮಿಳುನಾಡಿನಂತೆಯೇ ನಾವೂ ದೇಶದಾದ್ಯಂತ ಮೀಸಲಾತಿ ಮಿತಿಯನ್ನು ಏರಿಸುವುದಾಗಿ ಹೇಳುತ್ತಿದ್ದೇವೆ. ಇಲ್ಲಿ ಮುಸ್ಲಿಮರ ವಿಷಯ ಎಲ್ಲಿ ಬಂತು? ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದು ಬಯಸಿದ್ದೇವೆ. ಹಾಗಾದರೆ, ಆರ್ಥಿಕವಾಗಿ ಹಿಂದುಳಿದ ವರ್ಗಗಳಲ್ಲಿ ಮುಸ್ಲಿಮರೂ ಬರುವುದಿಲ್ಲವೇ?' ಎಂದು ಪ್ರಶ್ನಿಸಿದರು.
'ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ: ಚುನಾವಣಾ ತಂತ್ರ'
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಜ್ಞಾಪೂರಕವಾಗಿಯೇ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. 'ಇಂಡಿಯಾ' ಮೈತ್ರಿಕೂಟವನ್ನು ಒಟ್ಟಿಗೆ ಇಟ್ಟುಕೊಳ್ಳುವ ಮೂಲಕ ಬಿಜೆಪಿಯನ್ನು ಮಣಿಸುವ ತಂತ್ರಗಾರಿಕೆಯ ಭಾಗವಾಗಿದೆ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲಾಗುತ್ತಿದೆ. ಆತ್ಮವಿಶ್ವಾಸ ಇಲ್ಲದ ಕಾರಣಕ್ಕಾಗಿ ಹೀಗೆ ಮಾಡಿರುವುದಲ್ಲ. ದೇಶದ ವಿವಿಧ ಪ್ರದೇಶಗಳಲ್ಲಿ ಶಕ್ತಿಯುತವಾಗಿರುವ ಪಕ್ಷಗಳನ್ನು ಒಗ್ಗೂಡಿಸಿಕೊಂಡು ಗೆಲುವು ಸಾಧಿಸುವ ತಂತ್ರವಿದು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ (ಕಾಂಗ್ರೆಸ್ ಪಕ್ಷವು ಒಟ್ಟು 328 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ 'ಇಂಡಿಯಾ' ಮೈತ್ರಿಕೂಟದ ಇತರ ಪಕ್ಷಗಳು ಒಟ್ಟು 200 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿದೆ)