ನವದೆಹಲಿ: ಸುಪ್ರೀಂ ಕೋರ್ಟ್ ವಿರುದ್ಧವೇ ಹಾನಿಕಾರಕ ಹೇಳಿಕೆಗಳನ್ನು ನೀಡಿದ್ದ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಅಧ್ಯಕ್ಷ ಆರ್.ವಿ.ಅಶೋಕನ್ ಅವರನ್ನು ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿತು.
ಪತಂಜಲಿ ಆಯುರ್ವೇದದ ತಪ್ಪುದಾರಿಗೆಳಯುವ ಜಾಹೀರಾತು ಪ್ರಕರಣದ ಕುರಿತು ಆರ್.ವಿ.ಅಶೋಕನ್ ಅವರು ಇತ್ತೀಚೆಗೆ ಪಿಟಿಐಗೆ ಸಂದರ್ಶನ ನೀಡಿದ್ದರು.
'ಇದು ಅಷ್ಟು ಸುಲಭವಾಗಿ ಕ್ಷಮಿಸುವ ವಿಚಾರವಲ್ಲ' ಎಂದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಇದ್ದ ವಿಭಾಗೀಯ ಪೀಠವು, 'ನೀವು ಸುಖಾಸನದಲ್ಲಿ ಕುಳಿತು ಪತ್ರಿಕಾ ಸಂದರ್ಶನ ನೀಡುತ್ತಾ, ನ್ಯಾಯಾಲಯದ ಬಗ್ಗೆ ವಿಡಂಬನೆ ಮಾಡುವುದು ತರವಲ್ಲ' ಎಂದು ತರಾಟೆಗೆ ತೆಗೆದುಕೊಂಡಿತು.
ಈ ಹಂತದಲ್ಲಿ ಐಎಂಎ ಅಧ್ಯಕ್ಷರು ಸಲ್ಲಿಸಿದ ಕ್ಷಮೆಯಾಚನೆಯ ಪ್ರಮಾಣಪತ್ರವನ್ನು ಸ್ವೀಕರಿಸಲು ಕೂಡ ನ್ಯಾಯಾಲಯಕ್ಕೆ ಒಲವಿಲ್ಲ ಎಂದು ಪೀಠವು ಐಎಂಎ ವಕೀಲರಿಗೆ ಸ್ಪಷ್ಟಪಡಿಸಿತು.
'ವಾಕ್ ಸ್ವಾತಂತ್ರ್ಯ ಮತ್ತು ಚಿಂತನೆಯ ಹಕ್ಕನ್ನು ಎತ್ತಿಹಿಡಿಯುವಲ್ಲಿ ನಾವು ಮೊದಲಿಗರು. ಆದರೆ ಕೆಲ ಸಂದರ್ಭಗಳಲ್ಲಿ ಸಂಯಮ ಹೊಂದಿರಬೇಕು. ಅದು ನಿಮ್ಮ ಸಂದರ್ಶನದಲ್ಲಿ ನಮಗೆ ಕಾಣಲಿಲ್ಲ' ಎಂದು ನ್ಯಾಯಮೂರ್ತಿ ಕೊಹ್ಲಿ ಅವರು ಹೇಳಿದರು. 'ಈ ಪ್ರಕರಣದಲ್ಲಿ ಐಎಂಎ ಅರ್ಜಿದಾರರಾಗಿರುವಾಗ, ಈ ರೀತಿಯ ಹೇಳಿಕೆಗಳನ್ನು ನೀವು ಏಕೆ ನೀಡಿದಿರಿ' ಎಂದು ನ್ಯಾಯಪೀಠ ಪ್ರಶ್ನಿಸಿತು.
ಹೆಚ್ಚಿನ ಜವಾಬ್ದಾರಿ ನಿರೀಕ್ಷೆ:
'ವೃತ್ತಿಯಲ್ಲಿ 45 ವರ್ಷಗಳ ಅನುಭವ ಹೊಂದಿರುವ ಮತ್ತು ಐಎಎ ಅಧ್ಯಕ್ಷರಾಗಿರುವ ನೀವು ಸಂದರ್ಶನ ನೀಡುವಾಗ ಹೆಚ್ಚಿನ ಜವಾಬ್ದಾರಿ ಹೊಂದಿರಬೇಕು ಎಂಬುದನ್ನು ನಿರೀಕ್ಷಿಸಲಾಗುತ್ತದೆ' ಎಂದು ಪೀಠ ಹೇಳಿತು.
'ನ್ಯಾಯಾಲಯದ ಆದೇಶದ ವಿರುದ್ಧ ನಿಮ್ಮ ಆಂತರಿಕ ಭಾವನೆಯನ್ನು ಈ ರೀತಿಯ ಸಂದರ್ಶನದಲ್ಲಿ ಹೊರಹಾಕಕೂಡದು' ಎಂದು ನ್ಯಾಯಮೂರ್ತಿ ಅಮಾನುಲ್ಲಾ ಖಾರವಾಗಿ ಹೇಳಿದರು.
'ನೀವು ಹೇಳಿದ್ದನ್ನೆಲ್ಲ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂಬುದು ನಿಮಗೆ ಗೊತ್ತಿದೆ. ಪತಂಜಲಿ ಕಡೆಯಿಂದ ವಿವರಣೆ ಪಡೆದಿದ್ದೇವೆ. ಅಲ್ಲದೆ ಅವರ ಕ್ಷಮೆಯಾಚನೆಗಳೂ ನಮ್ಮನ್ನು ಮೆಚ್ಚಿಸಲಿಲ್ಲ. ಅದೂ ಒಂದಲ್ಲ, ಎರಡಲ್ಲ; ಮೂರಕ್ಕೂ ಹೆಚ್ಚು ಬಾರಿ. ಅವರು ಹೃದಯದಿಂದ ಕ್ಷಮೆಯಾಚಿಸಿದ್ದರು ಎಂದು ನಮಗೆ ಅನಿಸಿರಲಿಲ್ಲ. ನಿಮ್ಮ ಪ್ರಮಾಣಪತ್ರಕ್ಕೂ ನಾವು ಇದೇ ರೀತಿ ಹೇಳಬಯಸುತ್ತೇವೆ' ಎಂದು ಪೀಠ ಹೇಳಿತು.
'ಅಶೋಕನ್ ಅವರ ಹೇಳಿಕೆಗಳು ತುಂಬಾ ದುರದೃಷ್ಟಕರ. ನಾವು ಉದಾರವಾಗಿದ್ದೇವೆ ಎಂದಮಾತ್ರಕ್ಕೆ ಯಾರಾದರೂ ಏನನ್ನಾದರೂ ಹೇಳಿ ತಪ್ಪಿಸಿಕೊಳ್ಳಬಹುದು ಎಂದು ಅರ್ಥವಲ್ಲ' ಎಂದಿತು.
ಸಾರ್ವಜನಿಕವಾಗಿ ಏಕೆ ಕ್ಷಮೆ ಕೇಳಿಲ್ಲ:
'ಐಎಂಎ ಸದಸ್ಯರ ತಂಡವನ್ನು ನೀವು ಮುನ್ನಡೆಸುತ್ತಿದ್ದೀರಿ. ನಿಮ್ಮ ಪ್ರಕಾರವೇ ಐಎಂಎನಲ್ಲಿ ದೇಶದಾದ್ಯಂತ 3.5 ಲಕ್ಷ ವೈದ್ಯ ಸದಸ್ಯರಿದ್ದಾರೆ. ಈ ಸಂಘದ ಅಧ್ಯಕ್ಷರಾಗಿ ನೀವು ಉಳಿದ ಸಹೋದ್ಯೋಗಿಗಳಿಗೆ ಯಾವ ರೀತಿಯ ನಿದರ್ಶನ ನೀಡುತ್ತಿದ್ದೀರಿ' ಎಂದು ಕೇಳಿದ ಪೀಠವು, 'ನೀವೇಕೆ ಸಾರ್ವಜನಿಕವಾಗಿ ಕ್ಷಮೆ ಕೇಳಿಲ್ಲ? ನೀವು ಇಲ್ಲಿಗೆ ಬರುವವರೆಗೆ ಏಕೆ ಕಾಯುತ್ತಿದ್ದೀರಿ' ಎಂದು ಪ್ರಶ್ನಿಸಿತು.
'ನ್ಯಾಯಮೂರ್ತಿಗಳು ಎದುರಿಸುವ ವೈಯಕ್ತಿಕ ಟೀಕೆಗಳಿಗೆ ನಾವು ಪ್ರತಿಕ್ರಿಯಿಸುವುದಿಲ್ಲ. ಈ ವಿಚಾರದಲ್ಲಿ ನಮಗೆ ಯಾವುದೇ ಅಹಂ ಇಲ್ಲ. ಆದರೆ ಈ ಸಂಸ್ಥೆಯ ವಿಷಯಕ್ಕೆ ಬಂದರೆ ಸುಮ್ಮನಿರುವುದಿಲ್ಲ. ನೀವು ಸಂಸ್ಥೆಯ ಮೇಲೆ ದಾಳಿ ಮಾಡಿದ್ದೀರಿ' ಎಂದು ನ್ಯಾಯಮೂರ್ತಿ ಅಮಾನುಲ್ಲಾ ಹೇಳಿದರು.
ಈ ಹಂತದಲ್ಲಿ ಅಶೋಕನ್ ಅವರು ಸಲ್ಲಿಸಿದ ಕ್ಷಮಾಪಣೆ ಪ್ರಮಾಣಪತ್ರವನ್ನು ಸ್ವೀಕರಿಸಲು ನ್ಯಾಯಾಲಯವು ಒಲವು ತೋರುತ್ತಿಲ್ಲ ಎಂದು ಪೀಠವು ಐಎಂಎ ಪರ ಹಾಜರಿದ್ದ ಹಿರಿಯ ವಕೀಲ ಪಿ.ಎಸ್.ಪಟ್ವಾಲಿಯಾ ಅವರಿಗೆ ತಿಳಿಸಿತು. 'ನಮಗೆ ಒಂದು ಅವಕಾಶ ನೀಡಿ, ಅದನ್ನು ಸರಿಪಡಿಸುತ್ತೇವೆ' ಎಂದು ಪಟ್ವಾಲಿಯಾ ಕೋರಿದರು. ವಿಚಾರಣೆಯನ್ನು ಪೀಠವು ಜುಲೈಗೆ ಮುಂದೂಡಿತು.
ಅಶೋಕನ್ ಅವರು ಏಪ್ರಿಲ್ 29ರಂದು ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ, 'ಐಎಂಎ ಮತ್ತು ಖಾಸಗಿ ವೈದ್ಯರ ಕೆಲ ಅಭ್ಯಾಸಗಳನ್ನು ಸುಪ್ರೀಂ ಕೋರ್ಟ್ ಟೀಕಿಸಿರುವುದು ದುರದೃಷ್ಟಕರ' ಎಂದು ಹೇಳಿದ್ದರು.
ಪತಂಜಲಿ: ತೀರ್ಪು ಕಾಯ್ದಿರಿಸಿದ 'ಸುಪ್ರೀಂ'
ತಪ್ಪುದಾರಿಗೆ ಎಳೆಯುವ ಜಾಹೀರಾತು ಪ್ರಕರಣದಲ್ಲಿ ಯೋಗ ಗುರು ಬಾಬಾ ರಾಮದೇವ ಮತ್ತು ಅವರ ಆಪ್ತ ಆಚಾರ್ಯ ಬಾಲಕೃಷ್ಣ ಹಾಗೂ ಪತಂಜಲಿ ಆಯುರ್ವೇದ್ ಲಿಮಿಟೆಡ್ ಕಂಪನಿಗೆ ನೀಡಿರುವ ನ್ಯಾಯಾಂಗ ನಿಂದನೆ ನೋಟಿಸ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿತು. ಪತಂಜಲಿಗೆ ಸಂಬಂಧಿಸಿದಂತೆ ಪರವಾನಗಿ ಅಮಾನತಾಗಿರುವ ಉತ್ಪನ್ನಗಳ ಜಾಹೀರಾತುಗಳನ್ನು ಹಿಂಪಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸಲು ಸಂಸ್ಥೆಯ ಪರ ವಕೀಲರು ಸಮಯ ಕೋರಿರುವುದನ್ನು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ವಿಭಾಗೀಯ ಪೀಠ ಗಮನಿಸಿತು. ಈ ಕುರಿತ ಪ್ರಮಾಣಪತ್ರವನ್ನು ಮೂರು ವಾರಗಳಲ್ಲಿ ಸಲ್ಲಿಸುವಂತೆ ಪೀಠ ಸೂಚಿಸಿತು. 5ರಿಂದ 7ರವರೆಗಿನ ಪ್ರತಿವಾದಿಗಳಿಗೆ (ಪತಂಜಲಿ ಆಯುರ್ವೇದ ಕಂಪನಿ ಬಾಲಕೃಷ್ಣ ಮತ್ತು ರಾಮದೇವ) ನೀಡಲಾದ ನಿಂದನೆ ನೋಟಿಸ್ ಕುರಿತ ಆದೇಶವನ್ನು ಕಾಯ್ದಿರಿಸಲಾಗಿದೆ ಎಂದು ಪೀಠ ಇದೇ ವೇಳೆ ತಿಳಿಸಿತು. ಉತ್ತರಾಖಂಡ ರಾಜ್ಯದ ಪರವಾನಗಿ ಪ್ರಾಧಿಕಾರವು ಕಳೆದ ತಿಂಗಳು ಅಮಾನತುಗೊಳಿಸಿರುವ ಪತಂಜಲಿ ಆಯುರ್ವೇದ ಕಂಪನಿಯ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಲಾಗಿದೆಯೇ ಎಂದು ಪೀಠ ಇದೇ ವೇಳೆ ಪ್ರಶ್ನಿಸಿತು. ಈ ಕುರಿತ ಮಾರಾಟವನ್ನು ನಿಲ್ಲಿಸಲಾಗಿದೆ ಎಂದು ಪತಂಜಲಿ ಪರ ವಾದಿಸಿದ ಹಿರಿಯ ವಕೀಲ ಬಲ್ಬೀರ್ ಸಿಂಗ್ ತಿಳಿಸಿದರು. 'ಸಾರ್ವಜನಿಕರಿಗೆ ಉತ್ತಮ ತಿಳಿವಳಿಕೆ ನೀಡಬೇಕು ಎಂಬುದು ನಮ್ಮ ಏಕೈಕ ಕಾಳಜಿ' ಎಂದು ಹೇಳಿದ ನ್ಯಾಯಮೂರ್ತಿ ಅಮಾನುಲ್ಲಾ ಅವರು 'ರಾಮದೇವ ಅವರಿಗೆ ಬಹಳಷ್ಟು ಅನುಯಾಯಿಗಳಿದ್ದಾರೆ ಮತ್ತು ಜನರು ಅವರನ್ನು ಕುರುಡಾಗಿ ಅನುಸರಿಸುತ್ತಾರೆ' ಎಂದರು. ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು 'ಯೋಗ ಮತ್ತು ಆಯುರ್ವೇದ ಕ್ಷೇತ್ರದಲ್ಲಿ ರಾಮದೇವ ಅವರದ್ದೇ ಆದ ಕೊಡುಗೆಗಳಿವೆ' ಎಂದೂ ಹೇಳಿದರು.