ಮುಂಬೈ: ಮುಂಬೈನ ಪ್ರಸಿದ್ಧ ತಾಜ್ ಹೋಟೆಲ್ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು, ಅವುಗಳನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದು, ಪರಿಶೀಲನೆ ಬಳಿಕ ಅದೊಂದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಶೋಧ ಕಾರ್ಯಾಚರಣೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮುಂಬೈ ಟ್ರಾಫಿಕ್ ಪೊಲೀಸರ ಸಹಾಯವಾಣಿ ವಾಟ್ಸ್‌ಆಯಪ್ ಸಂಖ್ಯೆಗೆ ಮೆಸೇಜ್ ಮಾಡಿದ್ದ ಮೊಬೈಲ್ ಸಂಖ್ಯೆಯನ್ನು ಪತ್ತೆ ಮಾಡಿದ್ದು, ಅದು ಉತ್ತರ ಪ್ರದೇಶದ ಆಗ್ರಾದ ಸಂಖ್ಯೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಮುಂಬೈನ ತಾಜ್ ಹೋಟೆಲ್ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದು, ಆ ಎರಡೂ ಪ್ರದೇಶಗಳನ್ನು ಸ್ಫೋಟಿಸುವುದಾಗಿ ಟ್ರಾಫಿಕ್ ಪೊಲೀಸರ ವಾಟ್ಸ್‌ಆಯಪ್ ಸಂಖ್ಯೆಗೆ ಮೆಸೇಜ್ ಮಾಡಲಾಗಿತ್ತು. ಟ್ರಾಫಿಕ್ ಪೊಲೀಸ್ ಕಾನ್‌ಸ್ಟೆಬಲ್ ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಳಿಕ, ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ'ಎಂದು ಅವರು ಹೇಳಿದ್ದಾರೆ.