ನವದೆಹಲಿ: ಕಾಂಗ್ರೆಸ್ ವಕ್ತಾರೆ ಹಾಗೂ ಛತ್ತೀಸ್‌ಗಢ ರಾಜ್ಯ ಘಟಕದ ಕಚೇರಿಯಲ್ಲಿ ಕಾಂಗ್ರೆಸ್ ಮಾಧ್ಯಮ ವಿಭಾಗದ ರಾಷ್ಟ್ರೀಯ ಸಂಯೋಜಕಿಯಾಗಿರುವ ರಾಧಿಕಾ ಖೇರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಭಾನುವಾರ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಖೇರಾ, ತಾವು ಇತ್ತೀಚಿಗೆ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ಪಕ್ಷದಲ್ಲಿ ತೀವ್ರ ವಿರೋಧ ಎದುರಿಸುತ್ತಿರುವುದಾಗಿ ಹೇಳಿದ್ದಾರೆ.
"ಧರ್ಮವನ್ನು ಬೆಂಬಲಿಸುವವರನ್ನು ವಿರೋಧಿಸುವುದು ಪುರಾತನ ಕಾಲದಿಂದಲೂ ನಡೆದುಬಂದ ಸತ್ಯ. ಹಿರಣ್ಯಕಶಿಪುವಿನಿಂದ ರಾವಣ ಮತ್ತು ಕಂಸನವರೆಗೆ ಇಂತಹ ಉದಾಹರಣೆಗಳು ಇವೆ. ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕಾಗಿ ರಾಜ್ಯ ಘಟಕದಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು" ಎಂದು ಖೇರಾ ಅವರು ಖರ್ಗೆಗೆ ಬರೆದ ಪತ್ರದಲ್ಲಿ ಆರೋಪಿಸಿದ್ದಾರೆ.
ನಾನು ನನ್ನ ಜೀವನದ 22 ವರ್ಷಗಳಿಗಿಂತ ಹೆಚ್ಚು ಸಮಯವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದೇನೆ. NSUI ನಿಂದ ಕಾಂಗ್ರೆಸ್‌ನ ಮಾಧ್ಯಮ ವಿಭಾಗದವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆದರೂ, ನಾನು ಅಯೋಧ್ಯೆ ರಾಮನನ್ನು ಬೆಂಬಲಿಸುತ್ತಿರುವ ಕಾರಣ ತೀವ್ರ ವಿರೋಧವನ್ನು ಎದುರಿಸಬೇಕಾಯಿತು ಎಂದು ಖೇರಾ ಆರೋಪಿಸಿದ್ದಾರೆ.
ಮೂರನೇ ಹಂತದ ಲೋಕಸಭೆ ಚುನಾವಣೆಗೆ ಕೇವಲ 2 ದಿನಗಳಿರುವಾಗ ರಾಧಿಕಾ ಖೇರಾ ಅವರ ಆರೋಪಗಳು ಸಾಕಷ್ಟು ಮಹತ್ವ ಪಡೆದುಕೊಂಡಿದೆ.