ನವದೆಹಲಿ: ಕಾರ್ಯಾಂಗದ ನಿಯಂತ್ರಣದಿಂದ ಮಾಧ್ಯಮ ಕ್ಷೇತ್ರವನ್ನು ಮುಕ್ತಗೊಳಿಸುವುದು ಹಾಗೂ ಹೆಚ್ಚು ಪಾರದರ್ಶಕತೆ ಖಾತ್ರಿಪಡಿಸುವ ಉದ್ದೇಶದ ಕರಡು ಮಸೂದೆಯೊಂದನ್ನು ದೇಶದ ಮಾಧ್ಯಮ ಸಂಸ್ಥೆಗಳು ಸಿದ್ಧಪಡಿಸಿವೆ.
ಭಾರತೀಯ ಪ್ರೆಸ್ ಕ್ಲಬ್, 'ಮಾಧ್ಯಮ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮಸೂದೆ, 2024' ಎಂಬ ಕರಡುವನ್ನು ಸಿದ್ಧಪಡಿಸಿದೆ.
ದಿ ಕ್ಯಾರವಾನ್ ನಿಯತಕಾಲಿಕದ ಕಾರ್ಯನಿರ್ವಾಹಕ ಸಂಪಾದಕ ಹರ್ತೋಷ್ ಸಿಂಗ್ ಬಾಲ್ ನೇತೃತ್ವದ 7 ಸದಸ್ಯರ ಸಮಿತಿಯು ಈ ಕರಡು ಮಸೂದೆಯನ್ನು ಸಿದ್ಧಪಡಿಸಿದೆ.
ಜೂನ್ 30ರ ವರೆಗೆ ಈ ಕರಡು ಮಸೂದೆ ಸಾರ್ವಜನಿಕರಿಗೆ ಲಭ್ಯವಿರಲಿದ್ದು, ಜನರು ತಮ್ಮ ಸಲಹೆ-ಸೂಚನೆಗಳನ್ನು ನೀಡಬಹುದು. ನಂತರ, ಅಂತಿಮಗೊಂಡ ಕರಡು ಮಸೂದೆಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಸಮಿತಿ ಹೇಳಿದೆ.
'ಮಾಧ್ಯಮ ಕ್ಷೇತ್ರದಲ್ಲಿ ಹೆಚ್ಚು ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪರಿಪೂರ್ಣವಾದ ಕ್ರಮ ಇದಲ್ಲ. ಈ ದಿಸೆಯಲ್ಲಿ ಇಟ್ಟ ಮೊದಲ ಹೆಜ್ಜೆ ಇದು. ಈ ವಿಚಾರವಾಗಿ ಸಿದ್ಧಪಡಿಸಲಾಗುತ್ತಿರುವ ಮೂರು ಮಸೂದೆಗಳ ಪೈಕಿ ಇದು ಮೊದಲನೆಯದು' ಎಂದು ಹರ್ತೋಷ್ ಸಿಂಗ್ ಹೇಳಿದ್ದಾರೆ.
'ಸರ್ಕಾರದ ಬಿಗಿ ಹಿಡಿತದ ಪರಿಣಾಮವಾಗಿ ಮಾಧ್ಯಮ ಸ್ವಾತಂತ್ರ್ಯ ಇಲ್ಲವಾಗಿದೆ. ಹಣಕಾಸು ಹಾಗೂ ಮಾಲೀಕತ್ವ ವಿಧಾನಗಳಲ್ಲಿ ಆಗಿರುವ ಬದಲಾವಣೆಗಳ ಪರಿಣಾಮ ಸರ್ಕಾರವು ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಿದೆ' ಎಂದೂ ಅವರು ಹೇಳಿದ್ದಾರೆ.
'ಮುಖ್ಯವಾಗಿ ಎರಡು ವಿಚಾರಗಳಿಗೆ ಈ ಕರಡುವಿನಲ್ಲಿ ಒತ್ತು ನೀಡಲಾಗಿದೆ. ಮೊದಲನೆಯದಾಗಿ, ಮಾಧ್ಯಮ ಸಂಸ್ಥೆಯೊಂದರ ಮಾಲೀಕರ ವಿವರಗಳು, ಅದರ ಹಣಕಾಸಿನ ವಿಧಾನ ಹಾಗೂ ಸರ್ಕಾರ ನೀಡುವ ಜಾಹೀರಾತುಗಳಿಂದ ಲಭಿಸುವ ಆದಾಯದ ಪಾಲಿನ ಬಗ್ಗೆ ಒತ್ತು ನೀಡಲಾಗಿದೆ. ಎರಡನೆಯದಾಗಿ, ಸ್ವಯಂ ಆಗಿ ಪಾರದರ್ಶಕತೆ ಅಳವಡಿಸಿಕೊಳ್ಳುವ ಮೂಲಕ ಮಾಧ್ಯಮ ಸಂಸ್ಥೆಯನ್ನು ಉತ್ತರದಾಯಿಯನ್ನಾಗಿ ಮಾಡುವುದು. ಈ ವಿಷಯದಲ್ಲಿ ಯಾವುದೇ ನಿಯಂತ್ರಣ ಇರಬಾರದು ಎಂಬುದಾಗಿದೆ' ಎಂದು ಬಾಲ್ ಹೇಳಿದ್ದಾರೆ.
ಮಾಧ್ಯಮ ಸಂಸ್ಥೆಗಳು ತಮ್ಮ ಮಾಲೀಕತ್ವ ಕುರಿತ ವಿವರಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಹಾಗೂ ಏಕಸ್ವಾಮ್ಯತೆಯನ್ನು ತೊಲಗಿಸುವ ಕುರಿತು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ.
ಕರಡು ಮಸೂದೆಯಲ್ಲಿನ ಪ್ರಮುಖ ಅಂಶಗಳು
* ಮಾಧ್ಯಮ ಸಂಸ್ಥೆಗಳು ನ್ಯಾಯಸಮ್ಮತವಲ್ಲದ ಕಾರ್ಯವಿಧಾನ ಅನುಸರಿಸುವುದನ್ನು ತಡೆಯುವುದಕ್ಕಾಗಿ ಹಾಗೂ ಮಾಧ್ಯಮಗಳ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿಸಲು ರಾಷ್ಟ್ರೀಯ ಮಾಧ್ಯಮ ಪರಿಷತ್ತು ಸ್ಥಾಪಿಸಬೇಕು
* ಮಾಧ್ಯಮ ಕ್ಷೇತ್ರದ ನವೋದ್ಯಮಗಳಿಗೆ ಆರಂಭಿಕ ಹಣಕಾಸು ನೆರವು ನೀಡಲು ರಾಷ್ಟ್ರೀಯ ಮಾಧ್ಯಮ ನಿಧಿ ಸ್ಥಾಪಿಸಬೇಕು
* ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ, ಪ್ರತಿ ಮಾಧ್ಯಮ ಸಂಸ್ಥೆಯಿಂದ 25 ವರ್ಷ ವೃತ್ತಿ ಅನುಭವ ಇರುವ ಪತ್ರಕರ್ತ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಡಿಜಿಪಬ್‌ನ ಒಬ್ಬ ಪ್ರತಿನಿಧಿ, ದೆಹಲಿ, ಮುಂಬೈ, ಚಂಡೀಗಢ, ಬೆಂಗಳೂರು, ಕೋಲ್ಕತ್ತ ಪ್ರೆಸ್ ಕ್ಲಬ್‌ನಿಂದ ಸೇರಿ ಒಬ್ಬ ಪ್ರತಿನಿಧಿ, ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಂಡ್ ಡಿಜಿಟಲ್ ಅಸೋಸಿಯೇಶನ್‌ನ ಪ್ರತಿನಿಧಿ ಹಾಗೂ ಇಂಡಿಯನ್ ನ್ಯೂಸ್‌ಪೇಪರ್ ಸೊಸೈಟಿಯ ಒಬ್ಬ ಪ್ರತಿನಿಧಿ ಈ ಪರಿಷತ್ತಿನ ಸದಸ್ಯರಾಗಿರಬೇಕು
* ಪ್ರತಿಯೊಂದು ರಾಷ್ಟ್ರೀಯ ಪಕ್ಷದ ಒಬ್ಬ ಸಂಸದ, ರಾಜ್ಯ ಮಟ್ಟದ ಐದು ಪ್ರಮುಖ ರಾಜಕೀಯ ಪಕ್ಷಗಳ ಸಂಸದರು ಸಹ ಈ ಪರಿಷತ್ತಿನ ಸದಸ್ಯರಾಗಿರಬೇಕು.