ನವದೆಹಲಿ: ರಾಷ್ಟ್ರನಾಯಕರು, ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವವರಿಗೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಮಂಗಳವಾರ ತಳ್ಳಿಹಾಕಿದೆ.
ಈ ಅರ್ಜಿಯು ರಾಜಕೀಯ ಪ್ರೇರಿತವಾಗಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಈ ಕೋರ್ಟ್ ಏಕೆ ರಾಜಕೀಯ ಅಖಾಡವಾಗಿ ಬದಲಾಗಿದೆ ಎಂದು ಪ್ರಶ್ನಿಸಿತು.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರನ್ನು ಚುನಾವಣಾ ಪ್ರಚಾರದಲ್ಲಿ ಬಳಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.
'ಯಾರೋ ಒಬ್ಬರನ್ನು ಗುರಿಯಾಗಿಸಿಕೊಂಡು ಈ ಅರ್ಜಿಯನ್ನು ಸಲ್ಲಿಸಲಾಗಿದೆ' ಎಂದು ಪೀಠ ಹೇಳಿತು. ಅರ್ಜಿ ವಿಚಾರಣೆ ನಡೆಸಲು ಪೀಠ ನಿರಾಸಕ್ತಿ ತೋರಿದ ಕಾರಣ ಅರ್ಜಿದಾರರು ಅರ್ಜಿಯನ್ನು ಹಿಂಪಡೆದರು.
ರಾಷ್ಟ್ರನಾಯಕರ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸುವುದನ್ನು ವಾಕ್ ಸ್ವಾತಂತ್ರ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪ್ರತಿಪಾದಿಸಿ ವಿನಯ್ ಪಾಠಕ್ ಎಂಬುವವರು ಈ ಅರ್ಜಿ ಸಲ್ಲಿಸಿದ್ದರು.