ಮಾಸ್ಕೊ: ಯುದ್ಧ ಬಳಕೆಗೆ ತಯಾರಾಗಿರುವ ಅಣ್ವಸ್ತ್ರಗಳ ತಾಲೀಮು ನಡೆಸಲು ರಷ್ಯಾ ಸಿದ್ಧತೆ ನಡೆಸಿದೆ ಎಂದು ರಕ್ಷಣಾ ಸಚಿವಾಲಯ ಸೋಮವಾರ ಘೋಷಣೆ ಮಾಡಿದೆ. ಉಕ್ರೇನ್ ಮೇಲಿನ ದಾಳಿ ಕುರಿತು ಪಶ್ಚಿಮ ಭಾಗದ ಹಿರಿಯ ಅಧಿಕಾರಿಗಳೊಂದಿಗೆ ರಷ್ಯಾ ವಾಕ್ಸಮರ ನಡೆಸಿದ ಕೆಲವೇ ದಿನಗಳ ಬಳಿಕ, ರಕ್ಷಣಾ ಸಚಿವಾಲಯದ ಈ ಹೇಳಿಕೆ ಹೊರಬಿದ್ದಿದೆ.
'ರಷ್ಯಾ ಒಕ್ಕೂಟ ವ್ಯವಸ್ಥೆ ಕುರಿತು ಪಶ್ಚಿಮದ ಅಧಿಕಾರಿಗಳ ಪ್ರಚೋದನಕಾರಿ ಹೇಳಿಕೆಗಳು ಮತ್ತು ಬೆದರಿಕೆಗಳಿಗೆ ಈ ತಾಲೀಮು ಪ್ರತ್ಯುತ್ತರ' ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
ರಷ್ಯಾ ಸೇನೆಯು ಆಗಾಗ್ಗೆ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ತಾಲೀಮು ನಡೆಸುತ್ತದೆ. ಆದಾಗ್ಯೂ, ಇದೇ ಮೊದಲ ಬಾರಿಗೆ ಅಣ್ವಸ್ತ್ರ ಪರೀಕ್ಷೆಗೆ ಇಳಿಯುತ್ತಿರುವುದಾಗಿ ಘೋಷಣೆ ಮಾಡಿದೆ. ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ಪಶ್ಚಿಮ ರಾಷ್ಟ್ರಗಳಿಗೆ ಈ ಘೋಷಣೆಯು ಎಚ್ಚರಿಕೆಯಂತೆ ಕಂಡುಬರುತ್ತಿದೆ.
ಉಕ್ರೇನ್‌ಗೆ ಸೇನೆಯನ್ನು ಕಳುಹಿಸುವ ನಿರ್ಧಾರದಿಂದ ಹೊರಗುಳಿಯಲು ಸಾಧ್ಯವಿಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನ್ಯುವೆಲ್ ಮ್ಯಾಕ್ರಾನ್ ಹೇಳಿದ್ದರೆ, ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರಾನ್ ಅವರು, 'ರಷ್ಯಾದಲ್ಲಿರುವ ಯಾವುದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವಿರುವ ಬ್ರಿಟಿಷ್‌ನ ಶಸ್ತ್ರಾಸ್ತ್ರಗಳನ್ನು ಉಕ್ರೇನ್ ಸೇನಾಪಡೆ ಬಳಸಬಹುದು' ಎಂದಿದ್ದರು.
ಇಂಥ ಹೇಳಿಕೆಗಳು ಅಪಾಯಕಾರಿಯಾಗಿದ್ದು, ರಷ್ಯಾ ಮತ್ತು ನ್ಯಾಟೊ ಪಡೆಗಳ ನಡುವಿನ ಪ್ರಕ್ಷುಬ್ಧತೆಯನ್ನು ಬಿಂಬಿಸುತ್ತವೆ ಎಂದು ರಷ್ಯಾ ಎಚ್ಚರಿಕೆ ನೀಡಿತ್ತು.