ಉಪ್ಪಳ: ಬಂದ್ಯೋಡು ಪೇಟೆಯಲ್ಲಿ ತಂಡವೊಂದು ವ್ಯಾಪಾರಿಯನ್ನು ಅಪಹರಿಸಲು ಯತ್ನಿಸಿದ್ದು, ಸ್ಥಳೀಯರು ವಿರೋಧಿಸಿದ ಹಿನ್ನೆಲೆಯಲ್ಲಿ ತಂಡ ತಮ್ಮ ಕಾರು ಬಿಟ್ಟು ಪರಾರಿಯಾಗಿದೆ. ಭಾನುವಾರ ಘಟನೆ ನಡೆದಿದ್ದು, ಪೇಟೆಯಲ್ಲಿ ವ್ಯಾಪಾರಿಯಾಗಿರುವ ಇರ್ಷಾದ್ ಎಂಬವರನ್ನು ಕರ್ನಾಟಕ ನೋಂದಾಯಿತ ಕಾರಿನಲ್ಲಿ ಆಗಮಿಸಿದ ಐದು ಮಂದಿಯ ತಂಡ ಅಪಹರಿಸಲು ಯತ್ನಿಸಿದೆ. ಈ ಸಂದರ್ಭ ಇಕ್ಬಾಲ್ ಅವರನ್ನು ಅಂಗಡಿಯಿಂದ ಹೊರಕ್ಕೆಳೆದು ಕಾರಿಗೆ ಹತ್ತಿಸಲು ಯತ್ನಿಸುತ್ತಿದ್ದಂತೆ ಬೊಬ್ಬೆಕೇಳಿ ಆಸುಪಾಸಿನ ಜನರು ಒಟ್ಟುಸೇರಿದ್ದಾರೆ. ಈ ಸಂದರ್ಭ ತಂಡ ಕಾರನ್ನು ಬಿಟ್ಟು ಪರಾರಿಯಾಗಿದೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿದ್ದರೂ, ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ. ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಸಂಸ್ಥೆಯೊಂದರಿಂದ ಸಾಮಗ್ರಿ ಖರೀದಿಸಿ ಹಣ ಪಾವತಿಸಲು ಬಾಕಿಯಿರುವುದರಿಂದ ಈ ಮೊತ್ತ ವಸೂಲಿಗಾಗಿ ಇರ್ಷಾದ್ ಅವರನ್ನು ಅಪಹರಿಸಲು ಯತ್ನಿಸಿದ್ದಾರೆನ್ನಲಾಗಿದೆ.