ದುಬೈ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಅತಿ ಹೆಚ್ಚು ವೇಗದಿಂದ ಭೂಸ್ಪರ್ಶ ಮಾಡಿದೆ ಎಂದು ಇರಾನ್‌ನ ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ರೈಸಿ ಅವರು ಇರಾನ್‌ನ ಪೂರ್ವದ ಅಜೆರ್‌ಬೈಜಾನ್ ಪ್ರಾಂತ್ಯಕ್ಕೆ ತೆರಳುತ್ತಿದ್ದರು.
ಅಧ್ಯಕ್ಷ ರೈಸಿ ಅವರ ಜೊತೆಗೆ ಇರಾನ್‌ನ ವಿದೇಶಾಂಗ ವ್ಯವಹಾರಗಳ ಸಚಿವ ಹೊಸೈನಿ ಅಮಿರಬ್‌ದೊಲ್ಲಾಹಿಯನ್, ಅಜೆರ್‌ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು.
ಸ್ಥಳೀಯ ಅಧಿಕಾರಿಯೊಬ್ಬರು ಹೆಲಿಕಾಪ್ಟರ್ 'ಅಪಘಾತಕ್ಕೀಡಾಗಿದೆ' ಎಂದು ಹೇಳಿದ್ದಾರೆ. ರೈಸಿ ಅವರ ಆರೋಗ್ಯ ಕುರಿತಂತೆ ಸರ್ಕಾರ ಅಥವಾ ರಾಷ್ಟ್ರೀಯ ಟಿ.ವಿ ಮಾಹಿತಿ ನೀಡಿಲ್ಲ.
ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಪ್ರತಿಕೂಲ ಹವಾಮಾನ ಘಟನೆಗೆ ಕಾರಣ ಎನ್ನಲಾಗಿದೆ. ಅರಣ್ಯ ಭಾಗವಾದ ಈ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿದೆ. ಮಂಜು ಮಸುಕಿದ ವಾತಾವರಣವಿದೆ ಎಂದು ವರದಿ ಉಲ್ಲೇಖಿಸಿದೆ.
ಅರಾಸ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟು ಉದ್ಘಾಟನೆಗೆ ರೈಸಿ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಜೆರ್‌ಬೈಜಾನ್ ಅಧ್ಯಕ್ಷ ಇಲ್ಹಾಮ್ ಅಲಿಯೆವ್ ಅವರು ಭಾಗವಹಿಸುವವರಿದ್ದರು. ಅಜೆರ್‌ಬೈಸನ್ ಮತ್ತು ಇರಾನ್ ನಡುವಣ ಬಾಂಧವ್ಯ ಉತ್ತಮವಾಗಿಲ್ಲದಿದ್ದ ಸಂದರ್ಭದಲ್ಲಿ ರೈಸಿ ಭೇಟಿ ನೀಡಿದ್ದರು.
ಕಠಿಣ ನಿಲುವಿನ 63 ವರ್ಷದ ರೈಸಿ, ಈ ಮೊದಲು ದೇಶದ ನ್ಯಾಯಾಂಗದ ಮುಖ್ಯಸ್ಥರಾಗಿದ್ದರು. ಇರಾನ್‌ನ ಪರಮೋಚ್ಛ ನಾಯಕ ಅಯಾತ್ ಉಲ್ಲಾ ಅಲಿ ಖಮೇನಿ ಅವರ ಉತ್ತರಾಧಿಕಾರಿ ಎಂದೇ ಇವರನ್ನು ಗುರುತಿಸಲಾಗುತ್ತಿದೆ.
ಇರಾನ್ ಇತಿಹಾಸದಲ್ಲೇ ಮತಪ್ರಮಾಣ ಕಡಿಮೆ ಆಗಿದ್ದ 2021ರ ಅಧ್ಯಕ್ಷೀಯ ಚುನಾವಣೆಯಲ್ಲಿ ರೈಸಿ ಆಯ್ಕೆಯಾಗಿದ್ದರು. 1988ರಲ್ಲಿ ಸಾವಿರಾರು ರಾಜಕೀಯ ಕೈದಿಗಳ ಮರಣದಂಡನೆ ಹಿನ್ನೆಲೆಯಲ್ಲಿ ಅಮೆರಿಕ ಇವರ ಮೇಲೆ ನಿರ್ಬಂಧ ಹೇರಿದೆ.