ನವದೆಹಲಿ: ರಕ್ಷಣಾ ವ್ಯವಸ್ಥೆಗಳ ರಹಸ್ಯ ಮಾಹಿತಿ ಸಂಗ್ರಹಿಸುವುದಕ್ಕಾಗಿ ನೌಕಾಪಡೆ ಸಿಬ್ಬಂದಿಯ 'ಹನಿ ಟ್ರ್ಯಾಪ್'ಗೆ ಪಾಕಿಸ್ತಾನ ಗುಪ್ತಚರ ಸಂಸ್ಥೆ ಸಂಚು ರೂಪಿಸಿದ್ದ ಪ್ರಕರಣದ ಪ್ರಮುಖ ಆರೋಪಿ, ಮುಂಬೈ ನಿವಾಸಿ ಅಮಾನ್ ಸಲೀಂ ಶೇಖ್ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆರೋಪಪಟ್ಟಿ ದಾಖಲಿಸಿದೆ ಎಂದು ಅಧಿಕೃತ ಪ್ರಕಟಣೆ ಶುಕ್ರವಾರ ತಿಳಿಸಿದೆ.
ಶೇಖ್ ವಿರುದ್ಧ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಎನ್‌ಐಎ ಗುರುವಾರ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಅವರ ವಿರುದ್ಧ ಐಪಿಸಿ ಹಾಗೂ ಯುಎಪಿಎ ವಿವಿಧ ಸೆಕ್ಷನ್‌ಗಳಡಿ ಆರೋಪ ಹೊರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಶೇಖ್ ಅವರನ್ನು ಕಳೆದ ನವೆಂಬರ್ 20ರಂದು ಮುಂಬೈನಲ್ಲಿ ಎನ್‌ಐಎ ಬಂಧಿಸಿತ್ತು.
ನೌಕಾಪಡೆ ಸಿಬ್ಬಂದಿಯನ್ನು ಹನಿ ಟ್ರ್ಯಾಪ್‌ಗೆ ಒಳಪಡಿಸಲು ಪಾಕಿಸ್ತಾನ ಗುಪ್ತಚರ ಅಧಿಕಾರಿಗಳು ಬಳಸುತ್ತಿದ್ದ ಸಿಮ್ ಕಾರ್ಡ್‌ಗಳನ್ನು ಶೇಖ್ ಆಯಕ್ಟಿವೇಟ್ ಮಾಡುತ್ತಿದ್ದುದನ್ನು ವಿಜಯವಾಡ ಗುಪ್ತಚರ ಘಟಕ ಪತ್ತೆ ಹಚ್ಚಿತ್ತು. ನಂತರ, ತನಿಖೆಯನ್ನು ಎನ್‌ಐಎಗೆ ವಹಿಸಲಾಯಿತು.