ಪಾಲಕ್ಕಾಡ್: ಕಾಡಾನೆ ದಾಳಿಗೆ ಮಾಧ್ಯಮ ಕಾರ್ಯಕರ್ತನೊಬ್ಬ ದಾರುಣ ಅಂತ್ಯ ಕಂಡಿದ್ದಾನೆ. ಪಾಲಕ್ಕಾಡ್‍ನ ಕೊಟೊಕ್ಕಾಡ್‍ನಲ್ಲಿ ದಾಳಿ ನಡೆದಿದೆ. ಮಲೆಯಾಳಂ ದಿನಪತ್ರಿಕೆ ಮಾತೃಭೂಮಿ ನ್ಯೂಸ್ ನ ಕ್ಯಾಮರಾ ಮ್ಯಾನ್ ಎ.ವಿ.ಮುಖೇಶ್ (34) ಮೃತರು. ಮಲಂಬೌಳ ವೇನೋಳಿ ಎಳಂಬರಕಾಡ್ ಬಳಿ ಇಂದು(ಬುಧವಾರ) ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದೆ. ಜೊತೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರದೇಶದಲ್ಲಿ ಆನೆ ಬಂದಿಳಿದ ದೃಶ್ಯಗಳನ್ನು ಸೆರೆ ಹಿಡಿಯಲು ತಂಡ ಬಂದಿತ್ತು. ಕಾಡಾನೆಗಳ ಹಿಂಡು ನದಿ ದಾಟುತ್ತಿರುವ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾಗ ಕಾಡಾನೆ ಅನಿರೀಕ್ಷಿತವಾಗಿ ದಾಳಿ ಮಾಡಿದೆ.
ಕಾಡಾನೆ ನುಗ್ಗುತ್ತಿದ್ದಂತೆ ಮುಖೇಶ್, ವರದಿಗಾರ ಹಾಗೂ ಚಾಲಕ ಚೆಲ್ಲಾಪಿಲ್ಲಿಯಾದರು. ಆದರೆ ಓಡುವಾಗ ಮುಕೇಶ್ ಎಡವಿದರು. ನಂತರ ದಾಳಿ ನಡೆದಿದೆ. ಮುಖೇಶ್ ಅವರ ಸೊಂಟಕ್ಕೆ ಗಾಯವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಮೃತ ದೇಹವನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮಲಪ್ಪುರಂ ಮೂಲದ ಮುಖೇಶ್ ಪಾಲಕ್ಕಾಡ್‍ನಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದರು.