ಉಪ್ಪಳ: ಪೈವಳಿಕೆ ಕಟ್ಟದಮನೆ ನಿವಾಸಿ, ಕೃಷಿಕ ಗೋಪಾಲಕೃಷ್ಣ ಭಟ್ ಎಂಬವರ ಕತ್ತಿನಿಂದ ಚಿನ್ನದ ಸರ ಕಸಿದ ಪ್ರಕರಣಕ್ಕೆ ಸಂಬಂದಿಸಿ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಮಹಮ್ಮದ್ ಸುಹೈಲ್ ಹಾಗೂ ಬಂಟ್ವಾಳ ಬಿಲಾಲ್‍ನಗರ ನಿವಾಸಿ ಮಹಮ್ಮದಲಿ ಯಾನೆ ಅಸರು ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಕುಂಬಳೆ ಠಾಣೆ ಎಸ್.ಐ ವಿಪಿನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಬಂಟ್ವಾಳ ಬಿ.ಸಿ ರೋಡ್ ಸನಿಹದ ಶಾಂತಿಯಂಗಡಿಯಿಂದ ಮಹಮ್ಮದಲಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚನ್ನಡ್ಕ ನಿವಾಸಿ ಮಹಮ್ಮದ್ ಸುಹೈಲ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತನ್ನ ಸಹಚರ ಮಹಮ್ಮದಲಿ ಬಗ್ಗೆ ಮಾಹಿತಿ ನೀಡಿದ್ದನು. ಕುಂಬಳೆ, ಬದಿಯಡ್ಕ, ನೀಲೇಶ್ವರ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಸರ ಅಪಹರಣ, ದರೋಡೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಮಹಮ್ಮದಲಿ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.