ಪ್ರಯಾಗರಾಜ್: ಪಕ್ಷದ ಕಾರ್ಯಕರ್ತರ ಗದ್ದಲ ಹಾಗೂ ಕಾಲ್ತುಳಿತದಂತಹ ಪರಿಸ್ಥಿತಿಯಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಚುನಾವಣಾ ಸಭೆಯಲ್ಲಿ ಭಾಷಣ ಮಾಡದೆ ನಿರ್ಗಮಿಸಿದರು.
ಭಾನುವಾರ ಇಲ್ಲಿನ ಫುಲ್ಪುರ ಲೋಕಸಭಾ ಕ್ಷೇತ್ರದಿಂದ ಎಸ್‌ಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿರುವ ಅಮರನಾಥ್ ಮೌರ್ಯ ಪರವಾಗಿ ಜಂಟಿ ಚುನಾವಣಾ ಸಮಾವೇಶವನ್ನು ಆಯೋಜಿಸಲಾಗಿತ್ತು.
ಈ ವೇಳೆ ಅವರ ಬೆಂಬಲಿಗರು ಬ್ಯಾರಿಕೇಡ್‌ಗಳನ್ನು ಭೇದಿಸಿ ವೇದಿಕೆಯನ್ನು ತಲುಪಲು ಯತ್ನಿಸಿದರು. ಭಾರಿ ಜನಸಂದಣಿಯಿಂದ ಕಾಲ್ತುಳಿತದಂತಹ ಪರಿಸ್ಥಿತಿ ಏರ್ಪಟ್ಟಿತು. ಭದ್ರತಾ ದೃಷ್ಟಿಯಿಂದ ಉಭಯ ನಾಯಕರು ಅಲ್ಲಿಂದ ನಿರ್ಗಮಿಸಿದರು ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ.
ಸಮಾವೇಶದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಮತ್ತು ಎಸ್‌ಪಿ ಬೆಂಬಲಿಗರು ಸ್ಥಳಕ್ಕೆ ಆಗಮಿಸಿದ್ದರು. ಯಾದವ್ ಸ್ಥಳಕ್ಕೆ ಬಂದೊಡನೆ ವೇದಿಕೆಯ ಮುಂದೆ ನಿಂತಿದ್ದ ಪ್ರೇಕ್ಷಕರು.
ಬ್ಯಾರಿಕೇಡ್‌ಗಳನ್ನು ಭೇದಿಸಿ, ವೇದಿಕೆಯನ್ನು ತಲುಪಲು ಯತ್ನಿಸಿದದ್ದರಿಂದ ಕಾಲ್ತುಳಿತದಂತಹ ಪರಿಸ್ಥಿತಿ ಸೃಷ್ಟಿಯಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಕ್ಷದ ಕಾರ್ಯಕರ್ತರನ್ನು ಶಾಂತಗೊಳಿಸಲು ಅಖಿಲೇಶ್ ಹಾಗೂ ರಾಹುಲ್ ಪದೇ ಪದೇ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಬಳಿಕ ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ತಮ್ಮ ನಡುವೆ ಸಂಕ್ಷಿಪ್ತ ಚರ್ಚೆ ನಡೆಸಿ, ಭದ್ರತಾ ಲೋಪವನ್ನು ತಪ್ಪಿಸಲು ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ವರದಿಯಾಗಿದೆ.