ನವದೆಹಲಿ: 'ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆಗೆ ಒಳಪಡಿಸಬೇಕು' ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದ್ದಾರೆ.
ಕೇಜ್ರಿವಾಲ್ ಅವರು ಖಾಲಿಸ್ತಾನ್ ಪ್ರತ್ಯೇಕತಾವಾದಿ ಸಂಘಟನೆ 'ಸಿಖ್ ಫಾರ್ ಜಸ್ಟೀಸ್'ನಿಂದ (ಎಸ್‌ಎಫ್‌ಜೆ) ಸುಮಾರು ₹133.58 ಕೋಟಿ (16 ಮಿಲಿಯನ್ ಡಾಲರ್) ದೇಣಿಗೆಯನ್ನು ಪಡೆದಿದ್ದಾರೆ ಎಂಬ ದೂರಿಗೆ ಸಂಬಂಧಿಸಿದಂತೆ ಈ ಶಿಫಾರಸು ಮಾಡಿದ್ದಾರೆ.
ಆದರೆ, ಈ ಆರೋಪವನ್ನು ಆಮ್ ಆದ್ಮಿ ಪಕ್ಷವು (ಎಎಪಿ) ಸ್ಪಷ್ಟವಾಗಿ ತಳ್ಳಿಹಾಕಿದೆ. ಎನ್‌ಐಎ ತನಿಖೆಗೆ ಶಿಫಾರಸು ಮಾಡಿ ಲೆಫ್ಟಿನಂಟ್ ಗವರ್ನರ್ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಶುಕ್ರವಾರ ಪತ್ರ ಬರೆದಿದ್ದಾರೆ.
ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದ್ದ ದಿನವೇ ಲೆಫ್ಟಿನೆಂಟ್ ಗವರ್ನರ್ ಪತ್ರ ಬರೆದಿದ್ದರೆ, ಆ ಅರ್ಜಿಯು ವಿಚಾರಣೆಗೆ ಬರುವ ಮುನ್ನಾದಿನ ಸಾರ್ವತ್ರಿಕವಾಗಿ ಬಯಲಾಗಿದೆ.
ಈ ಬೆಳವಣಿಗೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಎಎಪಿ ನಾಯಕ, ಸಚಿವ ಸೌರಭ್ ಭಾರದ್ವಾಜ್, 'ಲೆಫ್ಟಿನೆಂಟ್ ಗವರ್ನರ್ ಅವರು ಬಿಜೆಪಿಯ ಏಜೆಂಟ್' ಎಂದು ಟೀಕಿಸಿದ್ದಾರೆ. 'ಇದು, ಕೇಂದ್ರದ ಆಡಳಿತ ಪಕ್ಷದ ಪರವಾಗಿ ನಡೆದಿರುವ ದೊಡ್ಡ ಸಂಚು' ಎಂದೂ ಆರೋಪಿಸಿದ್ದಾರೆ.
'ಲೋಕಸಭೆ ಚುನಾವಣೆಯಲ್ಲಿ ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಪರಾಭವಗೊಳ್ಳುವ ಭೀತಿಯು ಬಿಜೆಪಿಯನ್ನು ಕಾಡುತ್ತಿದೆ. ಅಲ್ಲದೆ, ಈ ಸಂಚನ್ನು ಪಂಜಾಬ್ ವಿಧಾನಸಭೆ ಚುನಾವಣೆಗೂ ಮೊದಲೇ ರೂಪಿಸಲಾಗಿತ್ತು' ಎಂದು ಟೀಕಿಸಿದ್ದಾರೆ.
ವಿಶ್ವ ಹಿಂದೂ ಫೆಡರೇಷನ್‌ನ ಭಾರತ ಘಟಕದ ಪ್ರಧಾನ ಕಾರ್ಯದರ್ಶಿ ಆಶೂ ಮೊಂಗಿಯಾ ಅವರು ಏಪ್ರಿಲ್ 1ರಂದು ನೀಡಿದ್ದ ದೂರು ಆಧರಿಸಿ ರಾಜ್ಯಪಾಲರು ಈ ಕ್ರಮ ಕೈಗೊಂಡಿದ್ದಾರೆ.
ಖಾಲಿಸ್ತಾನ ಪರ ಸಂಘಟನೆಗಳಿಂದ ಕೇಜ್ರಿವಾಲ್ ಅವರು ದೇಣಿಗೆ ಪಡೆದಿದ್ದಾರೆ ಎಂದು ಎಸ್‌ಎಫ್‌ಜೆ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನು ಅವರು ಹೇಳಿದ್ದಾರೆ ಎನ್ನಲಾದ ವಿಡಿಯೊವನ್ನು ಆಧರಿಸಿ ಮೊಂಗಿಯಾ ದೂರು ನೀಡಿದ್ದರು.
ಕೇಜ್ರಿವಾಲ್ ಅವರು ಸಿಖ್ ನಾಯಕರನ್ನು ನ್ಯೂಯಾರ್ಕ್‌ನಲ್ಲಿ 2014ರಲ್ಲಿ ಭೇಟಿಯಾಗಿದ್ದರು. ಅಲ್ಲದೆ, ಖಾಲಿಸ್ತಾನ್ ಪರ ನಾಯಕರ ಜೊತೆಗೆ ಗೋಪ್ಯವಾಗಿ ಚರ್ಚಿಸಿದ್ದರು. ಮರಣದಂಡನೆ ಶಿಕ್ಷೆಗೀಡಾಗಿದ್ದ ದೇವಿಂದರ್ ಪಾಲ್ ಸಿಂಗ್ ಭುಲ್ಲರ್ ಅವರಿಗೆ ಕ್ಷಮೆ ಕೋರಿ ಆಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು ಎಂಬ ಎಎಪಿ ಟ್ವೀಟ್ ಅನ್ನೂ ಪೂರಕವಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ವಿರುದ್ಧ ಆರೋಪಗಳಿರುವುದು ಹಾಗೂ ಕೋಟ್ಯಂತರ ಮೊತ್ತವನ್ನು ಭಾರತದಲ್ಲಿ ಈಗ ನಿಷೇಧಿಸಿರುವ ಸಂಘಟನೆಯಿಂದ ದೇಣಿಗೆ ಪಡೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಸ್ತೃತ ತನಿಖೆ ಅಗತ್ಯವಿದೆ. ಪ್ರಕರಣದ ಸೂಕ್ಷ್ಮತೆ, ಆರೋಪಗಳ ಗಂಭೀರತೆ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ಪರಿಗಣಿಸಬಹುದಾಗಿದೆ ಎಂದು ಸಲಹೆ ಮಾಡಿದ್ದಾರೆ ಎಂದು ತಿಳಿಸಿವೆ.