ನವದೆಹಲಿ (PTI): 'ಭಾರತವು ಇಂದು ವಿಶ್ವದಾದ್ಯಂತ ಸ್ನೇಹಪೂರ್ಣ ಮತ್ತು ಸಮೃದ್ಧ ದೇಶವಾಗಿ ಗುರುತಿಸಿಕೊಂಡಿರುವುದು ಅಷ್ಟೇ ಅಲ್ಲದೆ, ತನ್ನ ದೇಶದ ಜನರನ್ನು ರಕ್ಷಿಸುವ ಮತ್ತು ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುವ ದೃಢ ನಿಶ್ಚಯದ ದೇಶವಾಗಿದೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದರು.
ದೆಹಲಿ ವಿಶ್ವವಿದ್ಯಾಲಯದ ಹಂಸರಾಜ್ ಕಾಲೇಜಿನಲ್ಲಿ ಮಂಗಳವಾರ ನಡೆದ 'ವಿಕಸಿತ ಭಾರತ @2047- ದ ವಾಯ್ಸ್ ಆಫ್ ದಿ ಯೂತ್' ವಿಚಾರ ಸಂಕಿರಣ ಉದ್ದೇಶಿಸಿ ಅವರು ಮಾತನಾಡಿದರು.
ಉಕ್ರೇನ್ ಸೇರಿದಂತೆ ಇನ್ನಿತರ ಯುದ್ಧಪೀಡಿತ ರಾಷ್ಟ್ರಗಳಲ್ಲಿ ನೆಲೆಸಿದ್ದ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಭಾರತದ ಕಾರ್ಯಾಚರಣೆ ಕುರಿತು ಅವರು ವಿವರಿಸಿದರು.
'ವಿಕಸಿತ ಭಾರತ' ಎಂಬುದು ಜನರನ್ನು ಪ್ರೇರಣೆಯನ್ನಾಗಿಸಲು ಮಾಡಿದ ಘೋಷವಾಕ್ಯ ಅಷ್ಟೇ ಅಲ್ಲ. ಬದಲಿಗೆ, ಮುಂದಿನ 25 ವರ್ಷಗಳ ಭಾರತದ ಭವಿಷ್ಯಕ್ಕಾಗಿ, ಕಳೆದ 10 ವರ್ಷಗಳಿಂದ ರೂಪಿಸಿದ ಬುನಾದಿಯಾಗಿದೆ. ಮುಂದಿನ 25 ವರ್ಷಗಳ 'ಅಮೃತ ಕಾಲ'ವು ನಿಮ್ಮ ಭವಿಷ್ಯವಾಗಿದೆ. ಇದು ವಿಕಸಿತ ಭಾರತದತ್ತ ಪ್ರಯಾಣವಾಗಿದೆ. ಈ ಪ್ರಯಾಣವನ್ನು ನೀವು (ವಿದ್ಯಾರ್ಥಿಗಳು) ಸಾಧ್ಯವಾಗಿಸಲಿದ್ದೀರಿ ಎಂದು ಹೇಳಿದರು.
'ಈ 25 ವರ್ಷಗಳ ಅವಧಿಯನ್ನು ಅವಕಾಶಗಳು ಮತ್ತು ಹೊಸ ಸವಾಲುಗಳ ಕಾಲವಾಗಿ ನಾನು ನೋಡುತ್ತೇನೆ. ಹಿಂದೆಂದೂ ಕಂಡಿರದ ಸವಾಲುಗಳು ಎದುರಾಗಲಿವೆ' ಎಂದ ಅವರು, ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನದ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು.
ಭಾರತವು ಇಂದು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನದ ನಾಯಕನಾಗಿ ಹೊರಹೊಮ್ಮಿದೆ. ಸಿನಿಮಾ ನಿರ್ಮಾಣಕ್ಕೆ ವ್ಯಯಿಸುವ ಹಣಕ್ಕಿಂತಲೂ ಕಡಿಮೆ ಮೊತ್ತದಲ್ಲಿ ಚಂದ್ರಯಾನ-3 ಅನ್ನು ಭಾರತ ಸಾಧ್ಯವಾಗಿಸಿದೆ ಎಂದು ತಿಳಿಸಿದರು.