ಕಾಸರಗೋಡು : ಜಿಲ್ಲೆಯಲ್ಲಿ ಮಳೆಗಾಲದ ಪೂರ್ವ ಸ್ವಚ್ಛತೆಯ ಭಾಗವಾಗಿ ಮೇ 5 ರಂದು ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಹಳಿ, ಹೊಳೆಗಳು , ಕಾಲುವೆಗಳು ಸಾರ್ವಜನಿಕ ಸ್ಥಳಗಳನ್ನು ಶುಚಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಸ್ಥಳೀಯಾಡಳಿತ ಸಂಸ್ಥೆಗಳ ಉಸ್ತುವಾರಿಯಲ್ಲಿ ಹಸಿರು ಸೇನೆ, ಉದ್ಯೋಗ ಖಾತ್ರಿ ಕಾರ್ಯಕರ್ತರು, ಎನ್ನೆಸ್ಸೆಸ್, ಎನ್ ಸಿ ಸಿ, ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
ಇನ್ನು ಮುಂದೆ ಮನೆಗಳಲ್ಲಿ ಡ್ರೈ ಡೇ ಆಚರಿಸ ಬೇಕು. ಮಾರ್ಚ್ 31ರಂದು ಎಲ್ಲಾ ಶಾಲೆಗಳಲ್ಲಿಯೂ ಮೊದಲ ಹಂತದ ಶುಚೀಕರಣ ಕಾರ್ಯಕ್ರಮ ನಡೆದಿದ್ದು, ಮುಂದಿನ ಶುಚೀಕರಣ ಕಾರ್ಯವನ್ನು ಶಾಲೆ ತೆರೆಯುವ ಒಂದು ವಾರ ಮುಂಚಿತವಾಗಿ ನಡೆಸಲಾಗುವುದು. ಸ್ಥಳೀಯಾಡಳಿತ ಸಂಸ್ಥೆಗಳ ವೃಕ್ಷ ಸಮಿತಿಗಳು ಅಪಾಯ ತಂದೊಡ್ಡುವ ಮರಗಳ ಬಗ್ಗೆ ಸಮೀಕ್ಷೆ ನಡೆಸಿ ತೀರ್ಮಾನ ಕೈಗೊಂಡು ಮಳೆಗಾಲದಲ್ಲಿ ಮರಗಳು ಉರುಳಿ ಬೀಳುವಂತಹ ಅಪಾಯ ತಪ್ಪಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯಲ್ಲಿರುವ ಮೂರು ಸೈಕ್ಲೋನ್ ಶೆಡ್‍ಗಳನ್ನು ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳೇ ಶುಚಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.