ಮುಂಬೈ: ಮತದಾನ ಮಾಡುವಾಗ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದ ಮೇಲೆ ಮಹಾರಾಷ್ಟ್ರದ ರಾಯಘಡದ ವ್ಯಕ್ತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಯಘಡ ಲೋಕಸಭಾ ಕ್ಷೇತ್ರದ ರೇವದಂಡದ ಮತಗಟ್ಟೆ ಸಂಖ್ಯೆ 244ರಲ್ಲಿ ಈ ಘಟನೆ ನಡೆದಿದೆ.
ಪ್ರಸಾದ್ ಶರದ್ ಗಾಂಧಿ ಎಂಬ ಮತದಾರ ಈ ಕೃತ್ಯ ಎಸಗಿದ್ದು, ಮತದಾನ ಮಾಡುವಾಗ ಮೊಬೈಲ್‌ನಲ್ಲಿ ರೀಲ್ಸ್ ಮಾಡಿದ್ದಾರೆ. ಯಾವ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂಬುದನ್ನು ಈ ಮೂಲಕ ಬಹಿರಂಗಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಡಿಯೊ ಚಿತ್ರೀಕರಿಸಿದ ಬಳಿಕ ಆತ ಅದನ್ನು ರೀಲ್ಸ್ ಮಾಡಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಅಲ್ಲದೆ, ವಾಟ್ಸ್‌ಆಯಪ್‌ನಲ್ಲೂ ಸ್ಟೇಟಸ್ ಹಾಕಿದ್ದಾನೆ.
ಈ ಮೂಲಕ ಮತದಾನ ಪ್ರಕ್ರಿಯೆಯ ಗೋಪ್ಯತಾ ನಿಯಮಗಳ ಉಲ್ಲಂಘನೆಯಾಗಿದ್ದು, ರೇವದಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.