ಮುಂಬೈ: ರೈಲ್ವೆ ಹಳ್ಳಿ ಮೇಲೆ ಕಳ್ಳರಿಂದ ಫೋನ್ ವಶಕ್ಕೆ ಪಡೆಯಲು ಹೋರಾಟ ನಡೆಸುತ್ತಿದ್ದ 30 ವರ್ಷದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರಿಗೆ ದರೋಡೆಕೋರರು ಮತ್ತು ಮಾದಕ ವ್ಯಸನಿಗಳ ತಂಡ ವಿಷದ ಚುಚ್ಚು ಮದ್ದು ನೀಡಿದ್ದರಿಂದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಮೃತನನ್ನು ಥಾಣೆಯ ವಿಶಾಲ್ ಪವಾರ್ ಎಂದು ಗುರುತಿಸಲಾಗಿದೆ. ಸ್ಥಳೀಯ ಶಸ್ತ್ರಾಸ್ತ್ರ ಘಟಕದಲ್ಲಿ ನಿಯೋಜಿತರಾಗಿದ್ದ ಇವರು ಘಟನೆ ನಡೆದ ಮೂರು ದಿನಗಳ ನಂತರ ಮೇ 1 ರಂದು ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
"ಏಪ್ರಿಲ್ 28 ರಂದು ರಾತ್ರಿ 9.30 ರ ಸುಮಾರಿಗೆ ಪವಾರ್ ಅವರು ಸರಳ ಉಡುಪಿನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಪವಾರ್ ಬಾಗಿಲ ಬಳಿ ನಿಂತು ಫೋನ್ ನಲ್ಲಿ ಮಾತನಾಡುತ್ತಿದ್ದಾಗ ಹಳಿಗಳ ಬಳಿ ನಿಂತಿದ್ದ ಅಪರಿಚಿತ ವ್ಯಕ್ತಿ ಪವಾರ್ ಅವರ ಕೈಗೆ ಬಡಿದ್ದರಿಂದ ಮೊಬೈಲ್ ಫೋನ್ ಕೆಳಗೆ ಬಿದ್ದಿದೆ. ನಂತರ ಆರೋಪಿ ಫೋನ್ ಎತ್ತಿಕೊಂಡು ಹಳಿಗಳ ನಡುವೆ ಓಡತೊಡಗಿದ್ದಾನೆ. ಪವಾರ್ ಕೂಡಾ ಕೆಳಗಿಳಿದು ಕಳ್ಳನನ್ನು ಹಿಂಬಾಲಿಸಿದ್ದಾರೆ. ಸ್ವಲ್ಪ ದೂರದ ನಂತರ, ಮಾದಕ ವ್ಯಸನಿಗಳ ಗುಂಪು ಪವಾರ್ ಅವರನ್ನು ಸುತ್ತುವರೆದಿತು ಮಾರಾಮಾರಿ ನಡೆದಿದೆ. ಆ ಸಂದರ್ಭದಲ್ಲಿ ಆರೋಪಿಗಳಲ್ಲಿ ಒಬ್ಬರು ಪವಾರ್ ಅವರ ಬೆನ್ನಿನ ಮೇಲೆ ವಿಷಕಾರಿ ಚುಚ್ಚುಮದ್ದು ಚುಚ್ಚಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜೆ ತಪ್ಪಿದ್ದ ಪವಾರ್ ಗೆ ಮರು ದಿನ ಪ್ರಜ್ಞೆ ಬಂದಿದ್ದು, ಮನೆಗೆ ಮರಳುವಲ್ಲಿ ಯಶಸ್ವಿಯೂ ಆಗಿದ್ದಾರೆ. ಆದರೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರ ಕುಟುಂಬಸ್ಥರು ಅವರನ್ನು ಥಾಣೆ ನಗರದ ಆಸ್ಪತ್ರೆಗೆ ಸ್ಥಳಾಂತರಿಸಿದರು. ಕೊಪ್ರಿ ಪೊಲೀಸ್ ಠಾಣೆಯ ಅಧಿಕಾರಿಗಳು ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಪ್ರಕರಣವನ್ನು ದಾದರ್‌ನಲ್ಲಿರುವ ಸರ್ಕಾರಿ ರೈಲ್ವೆ ಪೊಲೀಸರಿಗೆ ವರ್ಗಾಯಿಸಲಾಯಿತು.
ಚಿಕಿತ್ಸೆ ವೇಳೆ ಪವಾರ್ ಅವರ ಆರೋಗ್ಯ ಕ್ಷೀಣಿಸಿದ್ದು, ಬುಧವಾರ ಮೃತಪಟ್ಟಿದ್ದಾರೆ. ಜಿಆರ್‌ಪಿ ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಹಲವು ತಂಡಗಳನ್ನು ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.